ಸಮ್ಮಿಶ್ರ ಸರ್ಕಾರದ ಶಾಸಕರ ಬಹುದಿನಗಳ ಬೇಡಿಕೆಯಾದ ನಿಗಮ ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ನೇಮಕಕ್ಕೆ ಇದೀಗ ಗ್ರೀನ್ ಸಿಗ್ನಲ್ ಸಿಕ್ಕಿದೆ. ನಿರ್ದಿಷ್ಟ ನಿಗಮ ಮಂಡಳಿಗಳ ಸ್ಥಾನಗಳ ಹಂಚಿಕೆ ಮುಂದಿನ ವಾರದಲ್ಲೇ ನಡೆಯುವ ಸಾಧ್ಯತೆ ಇದೆ.  

ನವದೆಹಲಿ :  ಸಮ್ಮಿಶ್ರ ಸರ್ಕಾರದ ಶಾಸಕರ ಬಹುದಿನಗಳ ಬೇಡಿಕೆಯಾದ ನಿಗಮ ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ ಸನ್ನಿಹಿತವಾಗಿದೆ. ನಿರ್ದಿಷ್ಟನಿಗಮ ಮಂಡಳಿಗಳ ಹಂಚಿಕೆ ಬಗೆಗಿನ ಗೊಂದಲ ಶುಕ್ರವಾರ ನಡೆಯಲಿರುವ ಸಮನ್ವಯ ಸಮಿತಿ ಸಭೆಯಲ್ಲಿ ಇತ್ಯರ್ಥವಾದರೆ ಮುಂದಿನ ವಾರದಲ್ಲೇ ನೇಮಕ. ಇದಾಗದ ಪಕ್ಷದಲ್ಲಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ವಿದೇಶ ಪ್ರವಾಸ (ಸೆ.13) ಪೂರೈಸಿದ ನಂತರ ಈ ಪ್ರಕ್ರಿಯೆ ಅಂತಿಮಗೊಳ್ಳಲಿದೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.

ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿ ನೇಮಕಕ್ಕೆ ಜೆಡಿಎಸ್‌ ಸಜ್ಜಾಗಿದೆ. ಆದರೆ ಕಾಂಗ್ರೆಸ್‌ನಿಂದ ವಿಳಂಬವಾಗುತ್ತಿದೆ. ಇದು ಆಡಳಿತದ ಮೇಲೆ ಪರಿಣಾಮ ಬೀರುತ್ತಿದ್ದು, ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿ ನೇಮಕಕ್ಕೆ ಕಾಂಗ್ರೆಸ್‌ ಆದಷ್ಟುಬೇಗ ಹಸಿರು ನಿಶಾನೆ ತೋರಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಗುರುವಾರ ದೆಹಲಿಯಲ್ಲಿ ಕೋರಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ ಕೂಡ ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ತೀರ್ಮಾನಿಸಿದೆ.

ಇದರ ಪರಿಣಾಮವಾಗಿ ಶುಕ್ರವಾರದ ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಣಾಯಕ ಚರ್ಚೆ ನಡೆಯಲಿದೆ. ಮೊದಲ ಹಂತದಲ್ಲಿ 30 ನಿಗಮ ಮಂಡಳಿಗಳಿಗೆ ನೇಮಕವಾಗಲಿದ್ದು, ಕಾಂಗ್ರೆಸ್‌ಗೆ 20 ಹಾಗೂ ಜೆಡಿಎಸ್‌ಗೆ 10 ನಿಗಮ-ಮಂಡಳಿಗಳಿಗೆ ನೇಮಕವಾಗಲಿದೆ. ಆದರೆ, ಕೆಲ ಪ್ರಮುಖ ನಿಗಮ ಮಂಡಳಿಗಳ ಹಂಚಿಕೆ ಬಗ್ಗೆ ಇನ್ನೂ ಗೊಂದಲವಿದ್ದು, ಅದು ಶುಕ್ರವಾರದ ಸಭೆಯಲ್ಲಿ ಪರಿಹಾರವಾಗಬೇಕಿದೆ. ಈ ಗೊಂದಲ ಪರಿಹಾರವಾದರೆ ನಾಲ್ಕಾರು ದಿನಗಳಲ್ಲಿ ನೇಮಕ ಪ್ರಕ್ರಿಯೆ ಆರಂಭಗೊಳ್ಳಬಹುದು. ಇದಾಗದ ಪಕ್ಷದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿದೇಶ ಪ್ರವಾಸ ಮುಗಿಸಿ ಬಂದ ನಂತರ ಅಂದರೆ ಸೆ.13ರ ನಂತರ ಈ ಪ್ರಕ್ರಿಯೆ ನಡೆಯಬಹುದು.

ಎಚ್‌ಡಿಕೆ ಮನವಿ: ಈ ನಡುವೆ, ದೆಹಲಿಯಲ್ಲಿ ಗುರುವಾರ ರಾಹುಲ… ಗಾಂಧಿ ಅವರನ್ನು ತುಘಲಕ್‌ ಲೇನ್‌ನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದ ಕುಮಾರಸ್ವಾಮಿ, ನಿಗಮ ಮಂಡಳಿ ನೇಮಕಕ್ಕೆ ಕಾಂಗ್ರೆಸ್‌ ಶೀಘ್ರ ಹಸಿರು ನಿಶಾನೆ ನೀಡಬೇಕು ಎಂದು ಕೋರಿದರು. ಅಲ್ಲದೆ, ಉಸ್ತುವಾರಿ ಸಚಿವರ ನೇಮಕದ ಸಂದರ್ಭದಲ್ಲೂ ವಿಳಂಬವಾಗಿತ್ತು. ಈಗ ಸಂಪುಟ ಭರ್ತಿ ಮಾಡುವಲ್ಲಿ ತಡವಾಗುತ್ತಿದೆ. ಆದ್ದರಿಂದ ನಿಗಮ ಮಂಡಳಿ ಹಾಗೂ ಸಂಪುಟ ವಿಸ್ತರಣೆ ಕುರಿತು ಕಾಂಗ್ರೆಸ್‌ ತನ್ನ ಕಡೆಯಿಂದ ತ್ವರಿತ ತೀರ್ಮಾನ ಕೈಗೊಳ್ಳಲಿ ಎಂದು ಮನವಿ ಮಾಡಿದರು. ಈ ಬಗ್ಗೆ ಸೂಕ್ತ ಸಂದರ್ಭದಲ್ಲಿ ತೀರ್ಮಾನ ಕೈಗೊಳ್ಳುವ ಭರವಸೆಯನ್ನು ರಾಹುಲ… ಗಾಂಧಿ ನೀಡಿದರು ಎಂದು ತಿಳಿದು ಬಂದಿದೆ.

ಸಮನ್ವಯ ಸಮಿತಿ ವಿಸ್ತರಣೆ ಪ್ರಸ್ತಾಪ ಇಲ್ಲ!

ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ರಾಹುಲ್‌ ಗಾಂಧಿ ನಡುವಿನ ಮಾತುಕತೆ ವೇಳೆ ಸಮನ್ವಯ ಸಮಿತಿ ವಿಸ್ತರಣೆ ಕುರಿತು ಯಾವುದೇ ಪ್ರಸ್ತಾಪ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಸಮನ್ವಯ ಸಮಿತಿಗೆ ಸೇರುವ ನಿರೀಕ್ಷೆ ಸದ್ಯಕ್ಕೆ ಹುಸಿಯಾಗಿದೆ.

ಕೃತಜ್ಞತೆ ಸಲ್ಲಿಸಲು ಭೇಟಿ

ರಾಜ್ಯದ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಈಗ ನೂರು ದಿನ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ನಮಗೆ ಕೊಟ್ಟಿರುವ ಪೂರ್ಣ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಲು ಅವರನ್ನು ಭೇಟಿಯಾದೆ. ಈ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳ ಮುಖ್ಯಸ್ಥರ ನೇಮಕ ಶೀಘ್ರವೇ ನಡೆಸಲು ಅವಕಾಶ ನೀಡಬೇಕು ಎಂದು ಕೋರಿದ್ದೇನೆ. ಬೇರಿನ್ಯಾವ ವಿಷಯದ ಬಗ್ಗೆಯೂ ಸಮಾಲೋಚನೆ ನಡೆಸಿಲ್ಲ.

- ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಸಿದ್ದುಗೆ ಅಂಕುಶ ಹಾಕಲು ಮನವಿ?

ರಾಹುಲ್ ಗಾಂಧಿ ಅವರೊಂದಿಗೆ ಕೆಲವೇ ನಿಮಿಷಗಳ ತಮ್ಮ ಭೇಟಿಯನ್ನು ‘ಸೌಜನ್ಯದ ಭೇಟಿ’ ಎಂದು ಕುಮಾರಸ್ವಾಮಿ ಬಣ್ಣಿಸಿದ್ದರೂ ಕೂಡ ಕಾಂಗ್ರೆಸ್‌ನ ಕೆಲ ನಾಯಕರ ಹೇಳಿಕೆಗಳ ಬಗ್ಗೆ ಎಐಸಿಸಿ ಅಧ್ಯಕ್ಷರ ಮುಂದೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಸಿದ್ದರಾಮಯ್ಯ ಅವರ ಹೇಳಿಕೆಗಳು ಮತ್ತು ಚಟುವಟಿಕೆಗಳು ಮೈತ್ರಿ ಸರ್ಕಾರದಲ್ಲಿ ತಳಮಳ ಸೃಷ್ಟಿಸುತ್ತಿವೆ. ಅವರಿಗೆ ತುಸು ಬುದ್ಧಿಮಾತು ಹೇಳುವಂತೆ ರಾಹುಲ… ಗಾಂಧಿ ಅವರಲ್ಲಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಈ ಬಗ್ಗೆ ಸಮನ್ವಯ ಸಮಿತಿಯಲ್ಲಿ ಚರ್ಚಿಸುವಂತೆ ರಾಹುಲ… ಗಾಂಧಿ ಸೂಚಿಸಿದ್ದಾರೆ ಎನ್ನಲಾಗಿದೆ.