ಬೆಂಗಳೂರು :  ನಿಗಮ-ಮಂಡಳಿ ನೇಮಕದ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಭಾನುವಾರ ಸಭೆ ನಡೆಸಿದ್ದು, ಪಕ್ಷವಾರು ನಿಗಮ -ಮಂಡಳಿಗಳ ಅಧಿಕಾರ ಹಂಚಿಕೆ ಬಗ್ಗೆ ಮಿತ್ರ ಪಕ್ಷಗಳ ನಡುವೆ ಪ್ರಾಥಮಿಕ ಪಟ್ಟಿ ವಿನಿಮಯವಾಗಿದೆ ಎಂದು ತಿಳಿದು ಬಂದಿದೆ.

ಭಾನುವಾರ ಬೆಳಗ್ಗೆ ಕೆ.ಸಿ. ವೇಣುಗೋಪಾಲ್ ನೇತೃತ್ವದಲ್ಲಿ ಕುಮಾರಕೃಪ ಅತಿಥಿಗೃಹದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಯಾವ ನಿಗಮ-ಮಂಡಳಿಗಳ ಅಧಿಕಾರ ಪಡೆಯಬೇಕು  ಎಂಬ ಬಗ್ಗೆ ಚರ್ಚೆ ನಡೆಸಲಾಯಿತು. ನಂತರ ಸಮನ್ವಯ ಸಮಿತಿ ಸಭೆಯಲ್ಲೂ ಈ ಬಗ್ಗೆ ಸಮಾಲೋಚನೆ ನಡೆಸಲಾಯಿತು ಎಂದು ತಿಳಿದು ಬಂದಿದೆ.

ಈ ವೇಳೆ ಸಿದ್ದರಾಮಯ್ಯ ಅವರು ಆಯಾ ಖಾತೆಗಳಿಗೆ ಅನುಸಾರವಾಗಿ ನಿಗಮ ಮಂಡಳಿಗಳನ್ನು ಉಭಯ ಪಕ್ಷಗಳು ಹಂಚಿಕೊಳ್ಳುವುದು  ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಸಮನ್ವಯ ಸಮಿತಿಯ ಇತರೆ ಸದಸ್ಯರೂ ಬಹುತೇಕ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 

ಶಾಸಕರ ಬಲಾಬಲದ ಆಧಾರದ ಮೇಲೆ ನಿಗಮ-ಮಂಡಳಿಗಳ ಹಂಚಿಕೆ ಬಗ್ಗೆ ಈ ಮೊದಲೇ ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ ಪ್ರಮುಖ ನಿಗಮ ಮಂಡಳಿಗಳ ಪೈಕಿ ಕಾಂಗ್ರೆಸ್‌ನಿಂದ 20 ಹಾಗೂ ಜೆಡಿಎಸ್‌ನಿಂದ 10 ಸ್ಥಾನಗಳನ್ನು ನೇಮಕ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದ್ದು, ಕಾಂಗ್ರೆಸ್‌ಗೆ ಯಾವ ನಿಗಮ-ಮಂಡಳಿಗಳ ಅಧಿಕಾರ ಇರಬೇಕು ಹಾಗೂ ಜೆಡಿಎಸ್‌ಗೆ ಯಾವುದು  ಸೇರಬೇಕು ಎಂಬುದರ ಬಗ್ಗೆ ಬಹುತೇಕ ಅಂತಿಮ ಪಟ್ಟಿ ಸಿದ್ಧಗೊಂಡಿದೆ.

ಇನ್ನು ಕಾಂಗ್ರೆಸ್ ವ್ಯಾಪ್ತಿಗೆ ಬರುವ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಯಾರಿಗೆ ನೀಡಬೇಕು ಎಂಬುದರ ಬಗ್ಗೆ ಚರ್ಚೆಯಾಗಿಲ್ಲ. ಈ ಬಗ್ಗೆ ಸೋಮವಾರ ಮತ್ತೊಂದು ಸುತ್ತಿನ ಸಭೆ ನಡೆಸಿ ಅಂತಿಮಗೊಳಿಸುವ ಸಾಧ್ಯತೆ ಇದೆ. ಈ ವೇಳೆ ಶಾಸಕರ ಹಿರಿತನ, ಜಾತಿ ಹಾಗೂ ಜಿಲ್ಲೆವಾರು ಮಾಹಿತಿ ಕ್ರೋಢೀಕರಿಸಿ ವಿಶ್ಲೇಷಿಸಿದ ಬಳಿಕ ನೇಮಕ ಮಾಡಲಾಗುವುದು. ಪ್ರಸ್ತುತ ನಿಗಮ-ಮಂಡಳಿ ನೇಮಕದ ವೇಳೆ ಬಹುತೇಕ ಹಿರಿಯ ಶಾಸಕರು ಹಾಗೂ ಅತೃಪ್ತ ಶಾಸಕರಿಗೆ ಮಣೆ ಹಾಕಲಿದ್ದು, ಕೆಲ ಕಾರ್ಯಕರ್ತರಿಗೂ ಕಾಂಗ್ರೆಸ್ ಅವಕಾಶ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.

ಯಾವ ಪಕ್ಷಕ್ಕೆ ಯಾವ ಮಂಡಳಿ 
ಒಂದು ವೇಳೆ ಖಾತೆಗಳ ಆಧಾರದ ಮೇಲೆ ನಿಗಮ-ಮಂಡಳಿ ಹಂಚಿಕೆಗೆ ಉಭಯ ಪಕ್ಷಗಳು ಅಂತಿಮ ಮುದ್ರೆ ಒತ್ತಿದರೆ, ಕಾಂಗ್ರೆಸ್ ಬಳಿಯಿರುವ ಖಾತೆಗಳ ಆಧಾರದ ಮೇಲೆ ತೆಂಗು ನಾರು ಅಭಿವೃದ್ಧಿ ಮಂಡಳಿ, ಗ್ರಾಮೀಣ ಮೂಲಸೌಕರ್ಯ
ಅಭಿವೃದ್ಧಿ ನಿಗಮ, ಬಿಡಿಎ, ಜಲಮಂಡಳಿ, ಸ್ಲಂ ಬೋರ್ಡ್, ಗೃಹ ಮಂಡಳಿ, ಅರಣ್ಯ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮ, ವಾಣಿಜ್ಯ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮ, ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ, ದೇವರಾಜ ಅರಸು
ನಿಗಮ, ಅಂಬೇಡ್ಕರ್ ನಿಗಮ, ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮ, ಹಟ್ಟಿ ಗೋಲ್ಡ್ ಮೈನ್ಸ್, ವಕ್ಫ್ ಬೋರ್ಡ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ, ಕರಾವಳಿ ಅಭಿವೃದ್ಧಿ ಮಂಡಳಿ, ಬಾಲಭವನ ಸಿಗುವ ಸಾಧ್ಯತೆ ಇದೆ. ಅದೇ ರೀತಿ ಜೆಡಿಎಸ್ ಪಾಲಿಗೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಬೆಸ್ಕಾಂ, ರಾಜ್ಯ ರಸ್ತೆ ಹೆದ್ದಾರಿ ಅಭಿವೃದ್ಧಿ ನಿಗಮ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಕರ್ನಾಟಕ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್, ಎಂಎಸ್‌ಐಎಲ್, ಕರ್ನಾಟಕ ಜವಳಿ ಅಭಿವೃದ್ದಿ ನಿಗಮ, ರೇಷ್ಮೆ ಕೈಗಾರಿಕೆ ಅಭಿ ವೃದ್ಧಿ ನಿಗಮ, ಕೈಮಗ್ಗ ಅಭಿವೃದ್ಧಿ ನಿಗಮ ಮಂ ಡಳಿ, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ, ಕುರಿ ಅಭಿ ವೃದ್ಧಿ ನಿಗಮಗಳು ಸಿಗಲಿವೆ ಎನ್ನಲಾಗಿದೆ.