ಅಹಮದಾಬಾದ್: ಪೊಲೀಸ್ ಅಧಿಕಾರಿಗಳ ವಾಟ್ಸಪ್ ಸಂಭಾಷಣೆ ವೈರಲ್ ಆಗಿರುವ ಬೆನ್ನಲ್ಲೇ  ಗುಜರಾತ್ ಶಾಸಕ ಹಾಗೂ ದಲಿತ ಯುವನಾಯಕ ಜಿಗ್ನೆಶ್ ಮೆವಾನಿ ತಮ್ಮ ಜೀವಕ್ಕೆ ಅಪಾಯವಿದೆಯೆಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ಸದಸ್ಯರಾಗಿರುವ ‘ADR Police & MEDIA’ ಎಂಬ ವಾಟ್ಸಪ್ ಗ್ರೂಪ್’ನಲ್ಲಿ ಡಿವೈಎಸ್’ಪಿ ಯೊಬ್ಬರು, ರಾಜಕಾರಣಿಯನ್ನು ಪೊಲೀಸರು ಥಳಿಸುವ ಹಾಗೂ ಪೊಲೀಸ್ ಎನ್’ಕೌಂಟರ್’ ಬಗ್ಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮಾತನಾಡುವ ವಿಡಿಯೋ ಕ್ಲಿಪ್ ಹಾಕಿದ್ದಾರೆ. ಬಳಿಕ,  ಪೊಲೀಸರ ‘ಅಪ್ಪ’ನಾಗಲು ಹೊರಟಿರುವವರಿಗೆ ಇದೇ ಗತಿ, ಇದನ್ನು ನೆನಪಿನಲ್ಲಿಟ್ಟುಕೊಳ್ಳಿ- ಗುಜರಾತ್ ಪೊಲೀಸ್, ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಅದಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಮೈಲಿ ಇಮೋಜಿ ಹಾಕುವ ಮೂಲಕ ಪ್ರತಿಕ್ರಯಿಸಿದ್ದಾರೆ. ಆ ಸಂಭಾಷಣೆಯು ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗಿದ್ದು ಅದಕ್ಕೆ ಜಿಗ್ನೇಶ್ ಮೆವಾನಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ನನ್ನನ್ನು ಮುಗಿಸುವ ಬಗ್ಗೆ ಪೊಲೀಸರು ಚರ್ಚೆ ನಡೆಸುತ್ತಿದ್ದಾರೆ, ನನನ್ನು ಎನ್’ಕೌಂಟರ್’ನಲ್ಲಿ ಕೊಲ್ಲಲು ಆದೇಶ ಬಂದಿರುವುದು ಗಾಂಧಿನಗರದಿಂದಲೋ? ದೆಹಲಿಯಿಂದಲೋ ಎಂದು ಕೇಳಿದ್ದಾರೆ. ಇದು ಗಂಬೀರ ವಿಚಾರ, ಈ ಬಗ್ಗೆ ಗೃಹ ಕಾರ್ಯದರ್ಶಿ ಮತ್ತು ಡಿಜಿಪಿಗೆ ದೂರು ನೀಡುವುದಾಗಿ ಜಿಗ್ನೇಶ್ ಮೆವಾನಿ ಹೇಳಿದ್ದಾರೆ.