ಟಿಪ್ಪು ಜಯಂತಿ ಆಚರಣೆ ವಿವಾದ ಈಗ ಮತ್ತೆ ಭುಗಿಲೆದ್ದಿದೆ. ರಾಜ್ಯ ಸರ್ಕಾರದ ಆದೇಶದ ಹೊರತಾಗಿಯೂ ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಿಸುವುದಿಲ್ಲ ಎಂದು ಕೊಡಗು ಜಿಲ್ಲಾ ಪಂಚಾಯ್ತಿ ಸಡ್ಡು ಹೊಡೆದಿದ್ದರೆ, ಸರ್ಕಾರಿ ಕಾರ್ಯಕ್ರಮವಾದ ಟಿಪ್ಪು ಜಯಂತಿ ಆಚರಣೆಯಾಗಲೇಬೇಕು. ಅಡ್ಡಿಪಡಿಸಿದರೆ ಕಠಿಣ ಕ್ರಮ ಖಚಿತ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು/ಮಡಿಕೇರಿ: ಟಿಪ್ಪು ಜಯಂತಿ ಆಚರಣೆ ವಿವಾದ ಈಗ ಮತ್ತೆ ಭುಗಿಲೆದ್ದಿದೆ. ರಾಜ್ಯ ಸರ್ಕಾರದ ಆದೇಶದ ಹೊರತಾಗಿಯೂ ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಿಸುವುದಿಲ್ಲ ಎಂದು ಕೊಡಗು ಜಿಲ್ಲಾ ಪಂಚಾಯ್ತಿ ಸಡ್ಡು ಹೊಡೆದಿದ್ದರೆ, ಸರ್ಕಾರಿ ಕಾರ್ಯಕ್ರಮವಾದ ಟಿಪ್ಪು ಜಯಂತಿ ಆಚರಣೆಯಾಗಲೇಬೇಕು. ಅಡ್ಡಿಪಡಿಸಿದರೆ ಕಠಿಣ ಕ್ರಮ ಖಚಿತ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಕೊಡಗಿನಲ್ಲಿ ನಡೆದ ಕೊಡಗು ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಯು, ‘ಎರಡು ವರ್ಷಗಳ ಹಿಂದೆ ಕೊಡಗಿನಲ್ಲಿ ಇಬ್ಬರ ಸಾವಿಗೆ ಕಾರಣವಾಗಿದ್ದ ಟಿಪ್ಪು ಜಯಂತಿ ಆಚರಣೆಯನ್ನು ಈ ವರ್ಷ ಮಾಡಬಾರದು’ ಎಂದು ನಿರ್ಣಯ ಕೈಗೊಳ್ಳುವ ಮೂಲಕ ಈ ವಿವಾದಕ್ಕೆ ಮತ್ತೆ ಚಾಲನೆ ನೀಡಿದೆ. ಕೊಡಗು ಜಿ.ಪಂ. ಬಿಜೆಪಿ ಆಡಳಿತಕ್ಕೆ ಒಳಪಟ್ಟಿರುವುದು ಇಲ್ಲಿ ಗಮನಾರ್ಹ. ಜಿಲ್ಲಾ ಪಂಚಾಯತಿಯ ಈ ನಿರ್ಧಾರದ ಬಗ್ಗೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸಚಿವ ರಾಮಲಿಂಗಾರೆಡ್ಡಿ ಅವರು, ಟಿಪ್ಪು ಜಯಂತಿಯು ಸರ್ಕಾರಿ ಕಾರ್ಯಕ್ರಮವಾಗಿದ್ದು, ಶಿಷ್ಟಾಚಾರದಂತೆ ನಡೆಯಲಿದೆ. ಇದನ್ನು ಯಾರೂ ಅಡ್ಡಿಪಡಿಸಲು ಸಾಧ್ಯವಿಲ್ಲ.

ಸರ್ಕಾರಿ ಕಾರ್ಯಕ್ರಮವಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುವುದು. ರಾಜ್ಯದಲ್ಲಿ ನಡೆಯುವ ವಿವಿಧ ಜಯಂತಿಗಳಂತೆಯೇ ಟಿಪ್ಪು ಜಯಂತಿ ಕೂಡ ನಡೆಯಲಿದೆ ಎಂದು ತಿಳಿಸಿದ್ದಾರೆ.

ವಿವಾದಕ್ಕೆ ಕಾರಣವೇನು?: ಕೊಡಗು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅಧ್ಯಕ್ಷತೆಯಲ್ಲಿ ಗುರುವಾರ ಕೊಡಗಿನಲ್ಲಿ ಸಾಮಾನ್ಯ ಸಭೆ ನಡೆದಿದ್ದು, ಅದರಲ್ಲಿ ಬಿಜೆಪಿ ಸದಸ್ಯರು ಟಿಪ್ಪು ಜಯಂತಿ ಆಚರಣೆ ವಿಷಯ ಪ್ರಸ್ತಾಪಿಸಿದರು. ಕಳೆದೆರಡು ವರ್ಷಗಳಲ್ಲಿ ಜಿಲ್ಲೆಯ ಜನತೆ ಟಿಪ್ಪು ಜಯಂತಿಯನ್ನು ವಿರೋಧಿಸಿದ್ದಾರೆ. 2015ರಲ್ಲಿ ನಡೆದ ಟಿಪ್ಪು ಜಯಂತಿ ವೇಳೆ ಇಬ್ಬರು ಬಲಿಯಾಗಿದ್ದಾರೆ. ಕಳೆದ ವರ್ಷ ಜಯಂತಿ ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆದಿದೆ. ಆದ್ದರಿಂದ ಇಂತಹ ಆಚರಣೆ ಕೊಡಗಿನಲ್ಲಿ ನಡೆಯಬಾರದು. ಇದು ಶಾಂತಿಯುತ ಜಿಲ್ಲೆಗೆ ಕಪ್ಪು ಚುಕ್ಕೆಯಾಗಲಿದೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿದ ಕಾಂಗ್ರೆಸ್ ಸದಸ್ಯರು, ‘ಟಿಪ್ಪು ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲಾಗುವುದು. ಇದನ್ನು ವಿರೋಧಿಸಿ ಜಿಲ್ಲಾ ಪಂಚಾಯಿತಿ ನಿರ್ಣಯ ಕೈಗೊಳ್ಳುವಂತಿಲ್ಲ’ ಎಂದು ಪಟ್ಟು ಹಿಡಿದರು. ಆಗ ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ನಂತರ ಕಾಂಗ್ರೆಸ್ ಸದಸ್ಯರ ವಿರೋಧದ ನಡುವೆಯೂ ಟಿಪ್ಪು ಜಯಂತಿಯನ್ನು ಕೊಡಗಿನಲ್ಲಿ ಆಚರಿಸದಿರುವ ನಿರ್ಣಯವನ್ನು ಕೈಗೊಳ್ಳಲಾಯಿತು.