Asianet Suvarna News Asianet Suvarna News

ಸಿದ್ದು ಬಜೆಟ್‌ ಜೀವಂತವಿರುವಾಗ ಮತ್ತೊಂದು ಪೂರ್ಣ ಬಜೆಟ್‌ ಮಂಡಿಸಿದ್ದು ಹೇಗೆ?

- ಎಚ್‌ಡಿಕೆ ಬಜೆಟ್‌ನ ಸಿಂಧುತ್ವದ ಬಗ್ಗೆಯೇ ಡೌಟು!

- ಸಿದ್ದು ಬಜೆಟ್‌ ಜೀವಂತವಿರುವಾಗ ಮತ್ತೊಂದು ಪೂರ್ಣ ಬಜೆಟ್‌ ಮಂಡಿಸಿದ್ದು ಹೇಗೆ?

- ಬಿಜೆಪಿ ಗಂಭೀರ ಆಕ್ಷೇಪ: ಸಂವಿಧಾನ ತಜ್ಞರ ಮೊರೆಹೋದ ಸ್ಪೀಕರ್‌

controversy raised about Budget 2018

ಬೆಂಗಳೂರು (ಜು. 10):  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿಯಲ್ಲಿ ಮಂಡಿಸಿದ್ದ 2018-19ನೇ ಸಾಲಿನ ಬಜೆಟ್‌ ಜೀವಂತವಾಗಿರುವಾಗ ಅದೇ ಆರ್ಥಿಕ ವರ್ಷಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮತ್ತೊಂದು ಬಜೆಟ್‌ ಮಂಡನೆ ಮಾಡಿರುವುದು ಹೊಸ ಚರ್ಚೆ ಹುಟ್ಟುಹಾಕಿದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ ರದ್ದುಪಡಿಸಿರುವ ಬಗ್ಗೆ ಸ್ಪಷ್ಟಪಡಿಸಿಲ್ಲ. ಸಿದ್ದರಾಮಯ್ಯ ಅವರು 2018-19ನೇ ಸಾಲಿನ ಬಜೆಟ್‌ ಮಂಡನೆ ಮಾಡಿ ಜುಲೈ 31ರವರೆಗೆ ಲೇಖಾನುದಾನ ಪಡೆದಿದ್ದಾರೆ.

ಅವರು ಮಂಡಿಸಿದ್ದ ಬಜೆಟ್‌ ರದ್ದುಪಡಿಸಿರುವುದಾಗಿ ಹೊಸ ಸರ್ಕಾರ ಹೇಳಿಲ್ಲ. ಜತೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸಿರುವ ಬಜೆಟ್‌ ಪರಿಷ್ಕೃತ ಬಜೆಟ್‌ ಅಥವಾ ಪೂರಕ ಬಜೆಟ್‌ ಎಂದೂ ಹೇಳಿಲ್ಲ. ಒಂದು ಬಜೆಟ್‌ ಜೀವಂತವಾಗಿದ್ದಾಗ ಮತ್ತೊಂದು ಬಜೆಟ್‌ ಮಂಡನೆ ಮಾಡಲು ಹೇಗೆ ಸಾಧ್ಯ? ಜತೆಗೆ ಸಿದ್ದರಾಮಯ್ಯ ಅವರ ಬಜೆಟ್‌ನ ಎಲ್ಲಾ ಕಾರ್ಯಕ್ರಮಗಳನ್ನೂ ಮುಂದುವರೆಸಿರುವುದಾಗಿ ಕುಮಾರಸ್ವಾಮಿ ಬಜೆಟ್‌ನಲ್ಲಿ ಹೇಳಿದ್ದಾರೆ. ಕಾರ್ಯಕ್ರಮಗಳ ಅಂದಾಜು ವೆಚ್ಚ ಎಲ್ಲಿ ನೀಡಿದ್ದಾರೆ? ಸಂವಿಧಾನಬದ್ಧವಾಗಿ ಎಲ್ಲೂ ಒಂದೇ ವರ್ಷ ಎರಡು ಬಜೆಟ್‌ ಮಂಡನೆಗೆ ಅವಕಾಶ ನೀಡಿಲ್ಲ. ಹೀಗಿದ್ದರೂ ರಾಜ್ಯಪಾಲರು ಹೇಗೆ ಅನುಮತಿ ಕೊಟ್ಟರು ಎಂದು ಚಿಕ್ಕನಾಯಕನಹಳ್ಳಿ ಬಿಜೆಪಿ ಶಾಸಕ ಮಾಧುಸ್ವಾಮಿ ಗಂಭೀರ ಪ್ರಶ್ನೆ ಹುಟ್ಟುಹಾಕಿದ್ದಾರೆ.

ಸೋಮವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಾಧುಸ್ವಾಮಿ ಎತ್ತಿದ ಪ್ರಶ್ನೆಗೆ ವಿಧಾನಸಭೆ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು, ಈವರೆಗೂ ಇಂತಹ ಸನ್ನಿವೇಶ ಉದ್ಭವಿಸಿಲ್ಲ. ಇದು ಸಂವಿಧಾನಾತ್ಮಕ ಹಾಗೂ ತಾಂತ್ರಿಕವಾಗಿ ಕಠಿಣವಾದ ಪರಿಸ್ಥಿತಿ. ಹೀಗಾಗಿ ಸಂವಿಧಾನ ತಜ್ಞರೊಂದಿಗೆ ಚರ್ಚಿಸಿ ಈ ಬಗ್ಗೆ ಅಂತಿಮ ಆದೇಶ ನೀಡುವುದಾಗಿ ಹೇಳಿದರು. ಹೀಗಾಗಿ ಬಜೆಟ್‌ ಸಿಂಧುತ್ವದ ಬಗೆಗಿನ ಪ್ರಶ್ನೆ ಕುತೂಹಲ ಹುಟ್ಟಿಸಿದೆ.

ಕುಮಾರಸ್ವಾಮಿ ತಮ್ಮ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರ ಬಜೆಟ್‌ ಕಾರ್ಯಕ್ರಮ ಮುಂದುವರೆಸಿರುವುದಾಗಿ ಹೇಳಿದ್ದಾರೆ. ಯಾವ ಕಾರ್ಯಕ್ರಮ ಮುಂದುವರೆಸಿದ್ದಾರೆ? ಅದಕ್ಕೆ ಅಂದಾಜು ವೆಚ್ಚ ಹಾಗೂ ಹಣಕಾಸು ಲಭ್ಯತೆಯನ್ನು ಎಲ್ಲಿ ತೋರಿಸಿದ್ದಾರೆ? ಹಾಗಾದರೆ ಸಿದ್ದರಾಮಯ್ಯ ಅವರು ಮಂಡಿಸಿದ್ದ ಬಜೆಟ್‌ ಅನೂರ್ಜಿತವಾಗಿದೆಯೇ ಎಂದು ಪ್ರಶ್ನೆ ಮಾಡಿದರು.

ಸಿದ್ದರಾಮಯ್ಯ ಅವರು ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಿದ್ದಾರೆ. ಈಗ ಎಚ್‌.ಡಿ.ಕುಮಾರಸ್ವಾಮಿ ಕೂಡ ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಿದ್ದಾರೆ. ಕುಮಾರಸ್ವಾಮಿ ತಮ್ಮ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರ ಬಜೆಟ್‌ನ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮುಂದುವರಿಕೆ ಬಗ್ಗೆ ಮಾತ್ರ ಉಲ್ಲೇಖಿಸುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಬಜೆಟ್‌ ನಲ್ಲಿ ಉಲ್ಲೇಖಿಸಿದ್ದ ಅಂದಾಜುಗಳು ಮತ್ತು ಆರ್ಥಿಕ ಸ್ಥಿತಿಗತಿಗಳೇನು? ಇದು ಗೊಂದಲಕ್ಕೆ ಕಾರಣವಾಗಿದೆ ಎಂದರು.

ಇದಕ್ಕೆ ಉತ್ತರಿಸಿದ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ಜುಲೈವರೆಗೆ ಲೇಖಾನುದಾನ ತೆಗೆದುಕೊಂಡಿದ್ದರು. ನಾನು ಮುಂದಿನ ಮಾರ್ಚ್’ವರೆಗೆ  ಅನ್ವಯವಾಗುವ ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಿದ್ದೇನೆ. ಈ ರೀತಿ ಎರಡೆರಡು ಬಜೆಟ್‌ ಮಾಡಿರುವುದು ಹೊಸದೇನಲ್ಲ. ಹಿಂದೆ ಜಗದೀಶ್‌ ಶೆಟ್ಟರ್‌ ಬಜೆಟ್‌ ಮಂಡನೆ ಮಾಡಿದ್ದ ವರ್ಷದಲ್ಲೇ ಹೊಸ ಸರ್ಕಾರ ಬಂದ ಕಾರಣ ಸಿದ್ದರಾಮಯ್ಯ ಮತ್ತೆ ಬಜೆಟ್‌ ಮಂಡಿಸಿದ್ದರು. ಇದೂ ಕೂಡ ಹೊಸ ಸಂಪ್ರದಾಯ ಅಲ್ಲ ಎಂದು ಸಮರ್ಥಿಸಿಕೊಂಡರು.

ಗ್ರಾಮಪಂಚಾಯ್ತಿಯೇ ವಾಸಿ:

ಶಾಸಕ ಮಾಧುಸ್ವಾಮಿ ಮಾತನಾಡಿ, ಹಿಂದೆ ಜಗದೀಶ್‌ ಶೆಟ್ಟರ್‌ ಅವರು ಮಂಡಿಸಿದ್ದ ಬಜೆಟ್‌ ರದ್ದುಪಡಿಸಿ ಸಿದ್ದರಾಮಯ್ಯ ಅವರು ಪರಿಷ್ಕೃತ ಬಜೆಟ್‌ ಮಂಡಿಸಿದ್ದರು. ಸಿದ್ದರಾಮಯ್ಯ ಅವರ ಬಜೆಟ್‌ ಕಾಪಿ ತೆಗೆದು ನೋಡಿ. ಅದರಲ್ಲಿ ಪರಿಷ್ಕೃತ ಎಂದು ಬರೆದಿದೆ. ಗ್ರಾಮ ಪಂಚಾಯಿತಿಗಳಲ್ಲೂ ಕೂಡ ವರ್ಷಕ್ಕೆ ಒಮ್ಮೆ ಮಾತ್ರ ಸರ್ವಸದಸ್ಯರ ಸಭೆ ಕರೆದು ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸುತ್ತಾರೆ. ನಾವು ಅದಕ್ಕಿಂತ ಕಡೆಯಾಗಿದ್ದೇವೆ ಎಂದರು.

ಪತ್ಯುತ್ತರ ನೀಡಿದ ಸಿಎಂ, ನಮ್ಮ ಬಜೆಟ್‌ ಅನ್ನು ಗ್ರಾಮ ಪಂಚಾಯತಿಗೆ ಹೋಲಿಸಲಾಗುತ್ತಿದೆ. ಮಾತಿನ ಮೇಲೆ ನಿಗಾ ಮತ್ತು ಹಿಡಿತ ಇರಬೇಕು. ಸಿದ್ದರಾಮಯ್ಯ ಲೇಖಾನುದಾನ ಮಾತ್ರ ತೆಗೆದುಕೊಂಡಿದ್ದರು. ಆದರೆ ನಾನು ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಿದ್ದೇನೆ. ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್‌ನ ಅಂದಾಜುಗಳನ್ನು ಮುಂದುವರಿಸುವ ಅಗತ್ಯವಿಲ್ಲ. ಸಿದ್ದರಾಮಯ್ಯ ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ವಿಷಯ ಇರಲಿಲ್ಲ. ನಾವು ಅದನ್ನು ತಂದಿಲ್ಲವೇ? ಹಾಗಾಗಿ ನಮ್ಮ ಬಜೆಟ್‌ ಸಿದ್ದರಾಮಯ್ಯನವರ ಕಾರ್ಯಕ್ರಮಗಳನ್ನು ಒಳಗೊಂಡ ಹೊಸ ಬಜೆಟ್‌ ಎಂದು ಹೇಳಿದರು.

ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಯಡಿಯೂರಪ್ಪ, ಹಲವು ಬಜೆಟ್‌ ಮಂಡಿಸಿದ್ದ ಸಿದ್ದರಾಮಯ್ಯ ಇಂತಹ ಸಂವಿಧಾನಾತ್ಮಕ ಬಿಕ್ಕಟ್ಟು ಸೃಷ್ಟಿಯಾಗುತ್ತದೆ ಎಂದು ಗೊತ್ತಿದ್ದ ಕಾರಣದಿಂದಲೇ ಪೂರ್ಣ ಪ್ರಮಾಣದ ಬಜೆಟ್‌ ಮಂಡನೆ ಅಗತ್ಯವಿಲ್ಲ. ಪೂರಕ ಅಂದಾಜುಗಳ ಮಂಡನೆ ಸಾಕು ಎಂದು ಹೇಳಿದ್ದರು ಎಂದರು. ಇದಕ್ಕೆ ಜಗದೀಶ್‌ ಶೆಟ್ಟರ್‌ ಸಹಮತ ವ್ಯಕ್ತಪಡಿಸಿದರು.

ಸಂವಿಧಾನ ತಜ್ಞರ ಅಭಿಪ್ರಾಯಕ್ಕೆ ಮೊರೆ:

ಅಂತಿಮವಾಗಿ ಸ್ಪೀಕರ್‌ ರಮೇಶ್‌ ಕುಮಾರ್‌, ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‌ ರದ್ದಾಗಿದೆ ಎಂದು ಸರ್ಕಾರ ಹೇಳಿಲ್ಲ. ಜತೆಗೆ ಸಿದ್ದರಾಮಯ್ಯ ಬಜೆಟ್‌ನ ಎಲ್ಲಾ ಕಾರ್ಯಕ್ರಮಗಳನ್ನು ಮುಂದುವರೆಸಿರುವುದಾಗಿ ಹೇಳಿದ್ದಾರೆ. ಹೀಗಾಗಿ ಒಂದೇ ವರ್ಷದಲ್ಲಿ ಎರಡು ಬಜೆಟ್‌ ಮಂಡನೆ ಮಾಡಿರುವ ವಿಶಿಷ್ಟಪ್ರಸಂಗ ಉದ್ಭವವಾಗಿದೆ. ಮೊದಲ ಬಾರಿಗೆ ಇಂತಹ ಪ್ರಸಂಗ ಉದ್ಭವಿಸಿರುವುದರಿಂದ ಸಂವಿಧಾನ ತಜ್ಞರ ಅಭಿಪ್ರಾಯ ಪಡೆದು ಬಳಿಕ ರೂಲಿಂಗ್‌ ನೀಡುತ್ತೇನೆ. ನನ್ನ ನಿರ್ಧಾರ ಕಾಯ್ದಿರಿಸಿದ್ದೇನೆ ಎಂದರು.

Follow Us:
Download App:
  • android
  • ios