ಸಿಎಂ ಅವರ ಈ ನಡತೆಯು ಟೀಕೆಗೆ ಗುರಿಯಾಗಿದೆ. ಜನರಿಗೆ ಆದರ್ಶಪ್ರಾಯವಾಗಬೇಕಾದ ಮುಖ್ಯಮಂತ್ರಿಗಳು ಇಂಥ ನಡತೆಯ ಮೂಲಕ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಬಿಜೆಪಿ ಮುಖಂಡರು ಖಂಡಿಸಿದ್ದಾರೆ.
ಬೆಂಗಳೂರು(ಅ. 23): ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಂಸಾಹಾರ ಸೇವಿಸಿ ಧರ್ಮಸ್ಥಳದ ಮಂಜುನಾಥೇಶ್ವರ ದೇಗುಲಕ್ಕೆ ಭೇಟಿ ಕೊಟ್ಟ ಘಟನೆ ಹೊಸ ವಿವಾದ ಮತ್ತು ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿಗಳು ನಿನ್ನೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಅದಕ್ಕೆ ಮುನ್ನ ಭಂಟ್ವಾಳದಲ್ಲಿ ಸಿದ್ದರಾಮಯ್ಯನವರು ಮೀನಿನ ಊಟ ಮಾಡಿದ್ದರು.
ಧರ್ಮಸ್ಥಳವನ್ನು ಪುಣ್ಯಕ್ಷೇತ್ರವೆಂದು ಪರಿಗಣಿಸಲಾಗಿದ್ದು, ಆ ಕ್ಷೇತ್ರದಲ್ಲಿ ಸಿಗರೇಟ್, ಮದ್ಯ, ಮಾಂಸ ಇತ್ಯಾದಿಗಳು ಲಭ್ಯವಿಲ್ಲ. ಇಲ್ಲಿ ಮಾಂಸಾಹಾರ, ಮದ್ಯಸೇವನೆ ಮಾಡಿ ದೇವಸ್ಥಾನದ ಆವರಣ ಪ್ರವೇಶಿಸಬಾರದು ಎಂಬ ಮಾತಿದೆ. ಆದರೆ, ದೇವಸ್ಥಾನದ ಆಡಳಿತ ಮಂಡಳಿಯಿಂದ ಇಂಥ ಯಾವ ಲಿಖಿತ ನಿಯಮವಿಲ್ಲ.
ಆದರೆ, ಸಿಎಂ ಅವರ ಈ ನಡತೆಯು ಟೀಕೆಗೆ ಗುರಿಯಾಗಿದೆ. ಜನರಿಗೆ ಆದರ್ಶಪ್ರಾಯವಾಗಬೇಕಾದ ಮುಖ್ಯಮಂತ್ರಿಗಳು ಇಂಥ ನಡತೆಯ ಮೂಲಕ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಬಿಜೆಪಿ ಮುಖಂಡರು ಖಂಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ಘೋರ ಅಪರಾಧವನ್ನೇನೂ ಮಾಡಿಲ್ಲ. ಭಕ್ತಿ ಎಂಬುದು ಮನಸ್ಸಿನಲ್ಲಿರುವುದು ಮುಖ್ಯ. ಮಾಂಸಾಹಾರ ಸೇವಿಸಿ ದೇವರ ದರ್ಶನ ಮಾಡಬಾರದು. ಹಾಗಂತ, ಮಾಡಿಬಿಟ್ಟರೆ ಅದೇನೂ ಪ್ರಮಾದವೇನಲ್ಲ. ಸಿಎಂ ಬೇಕಂತಲೇ ಈ ಕೆಲಸ ಮಾಡಿಲ್ಲವಾದರೆ ಏನೂ ಕೆಟ್ಟದ್ದಲ್ಲ ಎಂದು ಆದ್ಯಾತ್ಮ ಚಿಂತಕರು ಅಭಿಪ್ರಾಯಪಟ್ಟಿದ್ದಾರೆ.
