ಚಂದೌಲಿ [ಉತ್ತರಪ್ರದೇಶ], [ಜ.20]:ಉತ್ತರ ಪ್ರದೇಶದ ಬಿಜೆಪಿ ಶಾಸಕಿ ಸಾಧನಾ ಸಿಂಗ್ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಉತ್ತರಪ್ರದೇಶದ ಚಂದೌಲಿ ಎಂಬಲ್ಲಿ ಶನಿವಾರ ನಡೆದ ಬಿಜೆಪಿಯ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮುಗಲ್​ಸರಾಯ್​ ಕ್ಷೇತ್ರದ ಬಿಜೆಪಿ ಶಾಸಕಿ ಸಾಧನಾ ಸಿಂಗ್​, ಮಾಯಾವತಿಗೆ ಪ್ರತಿಷ್ಠೆ, ಘನತೆ ಎಂಬುದೇ ಗೊತ್ತಿಲ್ಲ. ಆಕೆ ಅತ್ತ ಗಂಡಸೂ ಅಲ್ಲ, ಇತ್ತ ಹೆಂಗಸೂ ಅಲ್ಲ. ನಪುಂಸಕರಿಗಿಂತಲೂ ಕಡೆ ಎಂದು ವಿವದಾತ್ಮಕ ಹೇಳಿಕೆ ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಸಾಧನಾ ಸಿಂಗ್, ಲಖನೌ ಗೆಸ್ಟ್​ ಹೌಸ್​ ಪ್ರಕರಣದಲ್ಲಿ ಆಕೆಯ ಬಟ್ಟೆಯನ್ನು ಎಸ್​ಪಿ ಕಾರ್ಯಕರ್ತರು ಹರಿದು ಹಾಕಿದ್ದರು. 

ಆದರೂ, ಈಗ ಅಧಿಕಾರಕ್ಕಾಗಿ ಮರ್ಯಾದೆ ಮರೆತು ಮೈತ್ರಿ ಮಾಡಿಕೊಂಡಿದ್ದಾರೆ. ಅಕೆಯ ನಡೆಯನ್ನು ದೇಶದ ಮಹಿಳಾ ಸಮುದಾಯ ಖಂಡಿಸಬೇಕು ಎಂದು ಕಟು ಶಬ್ಧಗಳಿಂದ ವಾಗ್ದಾಳಿ ನಡೆಸಿದರು.

ಇದೀಗ ಇಂತಹ ಹೇಳಿಕೆ ನೀಡಿ ಸಂಕಷ್ಟಕ್ಕೆ ಗುರಿಯಾಗಿದ್ದು, ಅವಹೇಳನ ಮಾಡಿದ್ದ ಬಿಜೆಪಿ ಶಾಸಕಿ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.

ಈ ಹೇಳಿಕೆ ಹಲವು ಟೀಕೆಗಳಿಗೆ ಗುರಿಯಾಗುತ್ತಿದ್ದಂತೆ ಎಚ್ಚೆತ್ತ ಸಾಧನಾ ಸಿಂಗ್  ತನ್ನ ಮಾತಿನ ಬಗ್ಗೆ ಕ್ಷಮೆ ಕೇಳಿದ್ದಾರೆ.