ಬೆಂಗಳೂರು :  ಬಿಬಿಎಂಪಿ ಸ್ಥಾಯಿ ಸಮಿತಿಗಳಿಗೆ ಹೊಸ ಅಧ್ಯಕ್ಷರ ಆಯ್ಕೆಯಾಗುವ ಮೊದಲೇ ಪಾಲಿಕೆ ಸದಸ್ಯರೊಬ್ಬರು ಪ್ರಮುಖ ಸ್ಥಾಯಿ ಸಮಿತಿಯೊಂದರ ಅಧ್ಯಕ್ಷ ಸ್ಥಾನದಲ್ಲಿ ಕೂತು ವಿವಾದಕ್ಕೀಡಾಗಿದ್ದಾರೆ.

ಕಳೆದ ಡಿಸೆಂಬರ್‌ 14ರಂದು ನಡೆಯಬೇಕಿದ್ದ ಚುನಾವಣೆ ಮುಂದೂಡಿಕೆ ಆಗಿದ್ದರಿಂದ ಪಾಲಿಕೆಯ ಎಲ್ಲಾ 12 ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳು ಖಾಲಿ ಇವೆ. ಆದರೂ, ಪಾದರಾಯನಪುರ ವಾರ್ಡ್‌ನ ಜೆಡಿಎಸ್‌ ಪಕ್ಷದ ಸದಸ್ಯ ಇಮ್ರಾನ್‌ ಪಾಷಾ ಇತ್ತೀಚೆಗೆ ಶಿಕ್ಷಣ ಸ್ಥಾಯಿ ಸಮಿತಿ ಕಚೇರಿಯ ಅಧ್ಯಕ್ಷ ಸ್ಥಾನದಲ್ಲಿ ಕೂತು ತಮ್ಮ ಕೆಲ ಬೆಂಬಲಿಗರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದ್ದು, ವಿವಾದ ಉಂಟು ಮಾಡಿದೆ.

ಇಮ್ರಾನ್‌ ಪಾಷಾ ಅವರ ಈ ವರ್ತನೆ ಸರಿಯಲ್ಲ ಎಂದು ಪ್ರತಿಪಕ್ಷ ಬಿಜೆಪಿ ಟೀಕಿಸಿದೆ. ಚುನಾವಣೆಯಲ್ಲಿ ಆಯ್ಕೆಯಾದ ಬಳಿಕ ಯಾವುದೇ ಸದಸ್ಯರು ತಾವು ಆಯ್ಕೆಯಾದ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದಲ್ಲಿ ಕೂರಬೇಕು. ಅದನ್ನು ಬಿಟ್ಟು ಮೊದಲೇ ಈ ರೀತಿ ಆ ಸ್ಥಾನದಲ್ಲಿ ಕೂರುವುದು ಸದಸ್ಯರಿಗೆ ಶೋಭೆ ತರುವಂಥದ್ದಲ್ಲ. ಕೆಎಂಸಿ ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂದು ಪಾಲಿಕೆ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ಮಾಹಿತಿ ಪಡೆಯಲು ಹೋಗಿದ್ದೆ:  ಈ ಬಗ್ಗೆ ಇಮ್ರಾನ್‌ ಪಾಷಾ ಅವರನ್ನೇ ಪ್ರಶ್ನಿಸಿದಾಗ, ಶಿಕ್ಷಣ ಸ್ಥಾಯಿ ಸಮಿತಿ ಕಚೇರಿಗೆ ಹೋಗಿದ್ದು ನಿಜ. ಕಚೇರಿಯ ನವೀಕರಣ ನಡೆಯುತ್ತಿದ್ದು, ಅದನ್ನು ಪರಿಶೀಲಿಸಲು ಹೋಗಿದ್ದೆ. ಈ ವೇಳೆ ಕೂತು ಮಾತನಾಡಿದ್ದೇನೆ ಅಷ್ಟೆ. ಅಧ್ಯಕ್ಷಗಾಧಿಯಲ್ಲಿ ಕೂತು ಯಾವುದೇ ಆಡಳಿತಾತ್ಮಕ ಚರ್ಚೆ, ನಿರ್ಧಾರ ಮಾಡುವ ಕೆಲಸಗಳನ್ನು ಮಾಡಿದ್ದರೆ ಅದು ತಪ್ಪಾಗುತ್ತಿತ್ತು. ಅಂತಹ ಕೆಲಸವನ್ನು ನಾನು ಮಾಡಿಲ್ಲ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.