ಶಿವಲಿಂಗದ ಮೇಲೆ ಪಾದವಿಟ್ಟು ಪೂಜೆ ಮಾಡಿಸಿಕೊಂಡು ವಿವಾದಕ್ಕೀಡಾದ ಶಾಂತಿಲಿಂಗ ಸ್ವಾಮೀಜಿ ಮಠಕ್ಕೆ ವಾಪಸ್ಸಾಗಿದ್ದಾರೆ. ಇಬ್ಬರು ಸ್ವಾಮೀಜಿಗಳ ಮೂಲಕ ಶಿವಲಿಂಗದ ಮೇಲೆ ಪಾದವಿಟ್ಟು ಪೂಜೆ ಮಾಡಿಸಿಕೊಂಡ ಕ್ರಮವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಬೆಂಗಳೂರು (ನ.08): ಶಿವಲಿಂಗದ ಮೇಲೆ ಪಾದವಿಟ್ಟು ಪೂಜೆ ಮಾಡಿಸಿಕೊಂಡು ವಿವಾದಕ್ಕೀಡಾದ ಶಾಂತಿಲಿಂಗ ಸ್ವಾಮೀಜಿ ಮಠಕ್ಕೆ ವಾಪಸ್ಸಾಗಿದ್ದಾರೆ. ಇಬ್ಬರು ಸ್ವಾಮೀಜಿಗಳ ಮೂಲಕ ಶಿವಲಿಂಗದ ಮೇಲೆ ಪಾದವಿಟ್ಟು ಪೂಜೆ ಮಾಡಿಸಿಕೊಂಡ ಕ್ರಮವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಕೆರೆಕತ್ತಿಗನೂರಿನಲ್ಲಿ ಸ್ಥಾಪಿಸಿರುವ ಸಮಾಧಾನ ಮಠದ ಹೊಸ ಶಾಖಾ ಮಠದಲ್ಲಿ ಶಿವಲಿಂಗದ ಮೇಲೆ ಶ್ರೀಗಳು ಪಾದವಿಟ್ಟು ಪೂಜೆ ಮಾಡಿಸಿಕೊಂಡು ಸುದ್ದಿಯಾಗಿದ್ದರು. ಪ್ರಕರಣ ಸುದ್ದಿಯಾದ ಬಳಿಕ ಸ್ವಾಮೀಜಿ ಮಠ ಬಿಟ್ಟು ಹೊರಗಡೆ ಹೋಗಿದ್ದರು. ರಾತ್ರಿ 7 ಗಂಟೆ ವೇಳೆಗೆ ಸಮಾಧಾನ ಶಾಖಾ ಮಠಕ್ಕೆ ವಾಪಸ್ಸಾಗಿ, ಇಬ್ಬರು ಶ್ರೀಗಳ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ಶಾಂತಮುನಿ ಸ್ವಾಮೀಜಿ ಮತ್ತು ಅಮೇರಶ್ವರ ಸ್ವಾಮೀಜಿಯ ಸುದ್ದಿಗೋಷ್ಠಿ ನಡೆಸಿ, ವೀರಶೈವ ಸಿದ್ಧಾಂತ ಪ್ರಕಾರ ಶಿವಲಿಂಗದ ಮೇಲೆ ಪಾದವಿರಿಸುವ ಪದ್ಧತಿ ಸರಿಯಾಗಿದೆ. ಶಿಲೆ ಅಂಶ ಹೋಗಿ ದೈವತ್ವ ಸ್ಥಾಪಿಸುವ ಹಿನ್ನೆಲೆಯಲ್ಲಿ ಆಚರಿಸುವ ಪದ್ಧತಿ ಇದಾಗಿದೆ. ಸಂಸ್ಕಾರಕ್ಕೋಸ್ಕರ ಶಿವಲಿಂಗದ ಮೇಲೆ ಪಾದವಿರಿಸಿದ್ದರೆಂದು ಸಮರ್ಥನೆ ನೀಡಿದ್ದಾರೆ.
ಸ್ಥಾವರವಾಗಿದ್ದ ಶಿವಲಿಂಗ ಶಿಲೆಗೆ ಗುರು ಪಾದಸ್ಪರ್ಶವಾದಾಗಲೇ ದೈವತ್ವ ಬಂದಿದೆ. ಶಿವಲಿಂಗದ ಮೇಲೆ ಗುರುಗಳು ಪಾದವಿರಿಸಿದ್ದ ಬಗ್ಗೆ ಗೊಂದಲವೇ ಬೇಡ. ಗುರುಪಾದ ಸ್ಪರ್ಶದಿಂದಲೇ ಶಿಲೆಯಾಗಿದ್ದ ಶಿವಲಿಂಗಕ್ಕೆ ದೈವಶಕ್ತಿ ಪ್ರಾಪ್ತಿಯಾಗುತ್ತದೆ. ಗುರುವಿನ ಪಾದಸ್ಪರ್ಶ ಮೂಲಕವೇ ಶಿಲೆಯೆಂಬ ಶಿವಲಿಂಗಕ್ಕೆ ಜೀವಕಳೆ ಬರುತ್ತದೆ ಎಂದು ಸಮರ್ಥನೆ ನೀಡಿದ್ದಾರೆ.
ವರ್ಷ ಪೂರ್ತಿ ಮೌನವ್ರತ ಹಿನ್ನೆಲೆಯಲ್ಲಿ ಮಾತನಾಡದ ಶಾಂತಿಲಿಂಗ ಶ್ರೀಗಳು ವರ್ಷದಲ್ಲಿ ಯುಗಾದಿ ದಿನದಂದು ಮಾತ್ರ ಮಾತನಾಡುತ್ತಾರೆ.
