ವಿಧಾನಸೌಧದ ಆವರಣದಲ್ಲಿರುವ ಉಪಾಹಾರ ಕೇಂದ್ರಗಳ ಗುತ್ತಿಗೆ ನೀಡುವ ಟೆಂಡರ್‌ಗೆ ಸಂಬಂಧಿಸಿದಂತೆ ಗುತ್ತಿಗೆದಾರರೊಬ್ಬರು ರೂ.2  ಲಕ್ಷ ಲಂಚ ನೀಡಲು ವಿಧಾನಸೌಧಕ್ಕೆ ಹಣ ತಂದ ಘಟನೆ ಗುರುವಾರ ನಡೆದಿದೆ.

ಬೆಂಗಳೂರು (ಡಿ.15): ವಿಧಾನಸೌಧದ ಆವರಣದಲ್ಲಿರುವ ಉಪಾಹಾರ ಕೇಂದ್ರಗಳ ಗುತ್ತಿಗೆ ನೀಡುವ ಟೆಂಡರ್‌ಗೆ ಸಂಬಂಧಿಸಿದಂತೆ ಗುತ್ತಿಗೆದಾರರೊಬ್ಬರು ರೂ.2 ಲಕ್ಷ ಲಂಚ ನೀಡಲು ವಿಧಾನಸೌಧಕ್ಕೆ ಹಣ ತಂದ ಘಟನೆ ಗುರುವಾರ ನಡೆದಿದೆ.
ಉಪಾಹಾರ ಕೇಂದ್ರಗಳ ಗುತ್ತಿಗೆ ಪಡೆಯಲು ಟೆಂಡರ್‌ನಲ್ಲಿ ಭಾಗವಹಿಸಿದ್ದ ಗುತ್ತಿಗೆದಾರರೊಬ್ಬರು ತಮಗೆ ಟೆಂಡರ್ ನೀಡುವಂತೆ ರೂ.2 ಲಕ್ಷ ಹಣ ತಂದಿದ್ದರು. ಇದನ್ನು ವಿಧಾನಸಭೆ ಪ್ರಭಾರಿ ಕಾರ್ಯದರ್ಶಿ ಎಸ್. ಮೂರ್ತಿ ಅವರಿಗೆ ಕೊಡಲು ಮುಂದಾದಾಗ ಅವರು ನಿರಾಕರಿಸಿ ವಾಪಸ್ ಕಳುಹಿಸಿದ್ದಾರೆ. ಬಳಿಕ ಕಚೇರಿಗೆ ಪೊಲೀಸ್ ಭದ್ರತೆ ಪಡೆದಿದ್ದಾರೆ.
ಏನಿದು ಘಟನೆ?:
ಕಳೆದ ಕೆಲವು ವರ್ಷಗಳಿಂದ ವಿಧಾನಸೌಧದ ಮೂರು ಉಪಾಹಾರ ಕೇಂದ್ರಗಳನ್ನು ಗುತ್ತಿಗೆ ಆಧಾರದ ಮೇಲೆ ನಡೆಸುತ್ತಿರುವ ಗುತ್ತಿಗೆದಾರರೊಬ್ಬರು ಲಂಚ ನೀಡಲು ಮುಂದಾಗಿದ್ದು, ಸತತ ಎರಡು ದಿನಗಳ ಕಾಲ ಹಣ ನೀಡಲು ಯತ್ನಿಸಿದರೂ ವಿಧಾನಸಭೆ ಕಾರ್ಯದರ್ಶಿ ಮೂರ್ತಿ ಅದಕ್ಕೆ ಒಪ್ಪಿರಲಿಲ್ಲ. ಆದಾಗ್ಯೂ ಗುರುವಾರ ಬೆಳಗ್ಗೆಯೇ ಮತ್ತೊಮ್ಮೆ ಹಣ ಕೊಡಲು ಕಾರ್ಯದರ್ಶಿ ಕೊಠಡಿ ಬಳಿ ಗುತ್ತಿಗೆದಾರ ಪ್ರತ್ಯಕ್ಷನಾದ ಹಿನ್ನೆಲೆಯಲ್ಲಿ ಮಾರ್ಷಲ್‌ಗಳಿಗೆ ಮೂರ್ತಿ ದೂರು ನೀಡಿದ್ದರು. ಹೀಗಾಗಿ ಕೂಡಲೇ ಗುತ್ತಿಗೆದಾರ ಅಲ್ಲಿಂದ ಕಾಲ್ಕಿತ್ತಿದ್ದಾಗಿ ಮೂಲಗಳು ತಿಳಿಸಿವೆ.

ಕಳೆದ ಕೆಲ ವರ್ಷಗಳಿಂದ ವಿಧಾನಸೌಧದ ಆವರಣದಲ್ಲಿರುವ ಉಪಾಹಾರ ಕೇಂದ್ರಗಳಿಗೆ ಟೆಂಡರ್ ಇಲ್ಲದೇ ಗುತ್ತಿಗೆ ಮುಂದುವರಿಸಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಪಾರದರ್ಶಕವಾಗಿ ಉಪಾಹಾರ ಕೇಂದ್ರಗಳನ್ನು ಗುತ್ತಿಗೆ ನೀಡಬೇಕೆಂಬ ಉದ್ದೇಶದಿಂದ ಬಾರಿಗೆ ಕರೆಯಲಾಗಿತ್ತು. ಈ ಟೆಂಡರ್‌ನಲ್ಲಿ ಹಳೆಯ ಗುತ್ತಿಗೆದಾರರೂ ಪಾಲ್ಗೊಂಡಿದ್ದರು. ಆದರೆ, ತಾಂತ್ರಿಕ ಬಿಡ್‌ನಲ್ಲಿ ಹಳೆಯ ಗುತ್ತಿಗೆದಾರ ಅರ್ಹತೆ ಕಳೆದುಕೊಳ್ಳುವ ಭೀತಿಗೆ ಒಳಗಾಗಿ ತಮಗೇ ಟೆಂಡರ್ ನೀಡಬೇಕೆಂಬ ಬೇಡಿಕೆ ಇಟ್ಟು ಬುಧವಾರ ಕಾರ್ಯದರ್ಶಿ ಮೂರ್ತಿ ಕೊಠಡಿಗೆ ಬಂದು ಹಣದ ಆಮಿಷ ಒಡ್ಡಿದ್ದರು. ಆ ವೇಳೆ ಕಾರ್ಯದರ್ಶಿ ಮೂರ್ತಿ ಅದನ್ನು ನಿರಾಕರಿಸಿ, ಅಲ್ಲಿಂದ ಹೋಗುವಂತೆ ಸೂಚಿಸಿದ್ದರು ಎನ್ನಲಾಗಿದೆ. ಬಳಿಕ ಸಂಜೆ ಕಚೇರಿ ಅವಧಿ ಮುಗಿದ ಬಳಿಕ ವಿಧಾನಸೌಧದ ಕಾರಿಡಾರ್‌ನಲ್ಲಿ ಮನೆಗೆ ತೆರಳಲು ಕಾರ್ ಬಳಿ ಹೋಗುತ್ತಿದ್ದಾಗ ಮತ್ತೆ ಎದುರಾದ ಗುತ್ತಿಗೆದಾರ ಹಣ ಪಡೆಯುವಂತೆ ಒತ್ತಾಯಿಸಿದ್ದ. ಆಗಲೂ ಮೂರ್ತಿ ನಿರಾಕರಿಸಿ, ತಮ್ಮ ಪಾಡಿಗೆ ತಾವು ಮನೆಗೆ ತೆರಳಿದ್ದರು. ಕೊನೆಗೆ ಗುರುವಾರ ಬೆಳಗ್ಗೆಯೇ ಕಾರ್ಯದರ್ಶಿ ಕೊಠಡಿ ಎದುರು ಗುತ್ತಿಗೆದಾರ ಕಾದು ಕುಳಿತಿದ್ದ. ಹೀಗಾಗಿ ಕೊನೆಗೆ ಮಾರ್ಷಲ್‌ಗಳಿಗೆ ದೂರು ನೀಡಿದರು ಎನ್ನಲಾಗಿದೆ. ಈ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ ಕಾರ್ಯದರ್ಶಿ ಮೂರ್ತಿ ಕೊಠಡಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.