ಬೆಂಗಳೂರು (ಜು.04) :  ಸಂವಿಧಾನದ 371(ಜೆ) ವಿಧಿಗೆ ತಿದ್ದುಪಡಿ ಮಾಡಿ ಹೈ-ಕ ಅಭಿವೃದ್ಧಿ ಮಂಡಳಿ ರಚಿಸಿರುವಂತೆ ‘ಪಶ್ಚಿಮ ಘಟ್ಟಪ್ರದೇಶಾಭಿವೃದ್ಧಿ ಪ್ರಾಧಿಕಾರ’ ರಚಿಸಿ ಈ ಭಾಗದ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.

ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ ಸಮಿತಿ(ಸಹ್ಯಾದ್ರಿ)ಯ ಅಧ್ಯಕ್ಷ ಡಾ.ಎಸ್‌.ಚಂದ್ರಶೇಖರ್‌ ಅವರು ಪಶ್ಚಿಮ ಘಟ್ಟಗಳ ರಕ್ಷಣೆ ಕುರಿತು ವರದಿಯನ್ನು ಬುಧವಾರ ಅರಣ್ಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಸಲ್ಲಿಸಿದ್ದು, ಈ ವರದಿಯಲ್ಲಿ ಇಂತಹದೊಂದು ಸಲಹೆ ಮಾಡಲಾಗಿದೆ.

ಇದಲ್ಲದೆ, ಎತ್ತಿನಹೊಳೆ ಯೋಜನೆ ಹೊರತುಪಡಿಸಿ ಯಾವುದೇ ಹೊಸ ಬೃಹತ್‌ ಯೋಜನೆಗಳಿಗೆ ಒಪ್ಪಿಗೆ ನೀಡಬಾರದು. ಈ ಪ್ರದೇಶದಲ್ಲಿ ಬೃಹತ್‌ ಯಂತ್ರ ಬಳಕೆ ಮಾಡಿ ಗಣಿಗಾರಿಕೆ ನಡೆಸದಂತೆ ನಿರ್ಬಂಧಿಸಬೇಕು ಎಂಬುದು ಸೇರಿದಂತೆ ಈ ವರದಿಯಲ್ಲಿ 33 ಶಿಫಾರಸುಗಳನ್ನು ಸರ್ಕಾರಕ್ಕೆ ಮಾಡಲಾಗಿದೆ.

ಕುದುರೆಮುಖ ಅರಣ್ಯ ಪ್ರದೇಶಗಳಲ್ಲಿ ಹೇರಳವಾದ ಅರಣ್ಯ ಸಂಪತ್ತು ಮತ್ತು ನಾನಾ ಪ್ರಭೇದಗಳ ಮರಗಳಿವೆ. ಆದ್ದರಿಂದ ಈ ಭಾಗದಲ್ಲಿ ಅರಣ್ಯ ಮತ್ತು ಪರಿಸರ ಸಂಶೋಧನಾ ವಿವಿ ಸ್ಥಾಪನೆ ಮಾಡಬೇಕು. ಅರಣ್ಯ ಭಾಗಗಳಲ್ಲಿ ಗಣಿಗಾರಿಕೆ ನಡೆಸಲು ಬೃಹತ್‌ ಯಂತ್ರಗಳನ್ನು ಅಕ್ರಮವಾಗಿ ಬಳಕೆ ಮಾಡುತ್ತಿದ್ದು, ಅವುಗಳ ಮೇಲೆ ನಿಗಾ ವಹಿಸಬೇಕು. ಮರಗಳ ಸಮೀಕ್ಷೆ ನಡೆಸಿ ವರದಿ ಸಿದ್ದಪಡಿಸಿ ಪ್ರತಿ ವಲಯ ಅರಣ್ಯಾಧಿಕಾರಿಗಳಿಗೆ ನೀಡಬೇಕು. ನಿಯಮಾನುಸಾರ ಇಲ್ಲವೇ ಅಕ್ರಮವಾಗಿ ಮರ ಕಡಿತ ಮಾಡಿದಲ್ಲಿ ಅದಕ್ಕೆ ಕಾರಣ ನೀಡಬೇಕು. ಅಲ್ಲದೆ, ಈ ಭಾಗದಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಶಿಪಾರಸು ಮಾಡಲಾಗಿದೆ.

ವರದಿಯಲ್ಲಿನ ಪ್ರಮುಖ ಶಿಫಾರಸುಗಳು:

ಪಶ್ಚಿಮ ಘಟ್ಟಅರಣ್ಯ ಪ್ರದೇಶದಲ್ಲಿ ಕಾಮಗಾರಿಗಳ ನಿಗಾ ವಹಿಸಬೇಕು. ಆಹಾರವನ್ನರಸಿ ಕಾಡಿನಿಂದ ನಾಡಿಗೆ ಬರುವ ಪ್ರಾಣಿಗಳಿಗೆ ತೊಂದರೆ ನೀಡದಂತೆ ಜನ ಜಾಗೃತಿ ಮೂಡಿಸಬೇಕು. ಆನೆಗಳಿಗೆ ಬೇಕಾದ ಆಹಾರ ಮತ್ತು ನೀರನ್ನು ಅರಣ್ಯದಲ್ಲಿ ಲಭ್ಯವಾಗುವಂತೆ ಮಾಡಿ ಗ್ರಾಮಗಳತ್ತ ಬರುವುದನ್ನು ತಡೆಯಬೇಕು. ಅಕ್ರಮ ಟಿಬರ್‌ ಮಾಫಿಯಾಗಳಿಗೆ ಕಡಿವಾಣ ಹಾಕಬೇಕು. ಪಾಶ್ಚಿಮಾತ್ಯ ದೇಶಗಳಲ್ಲಿ ಬಳಕೆ ಮಾಡುವ ಮಾದರಿಯಲ್ಲಿ ಹೆಲಿಕಾಪ್ಟರ್‌ಗಳ ಮೂಲಕ ಕಾಡ್ಗಿಚ್ಚು ತಡೆಯುವ ತಂತ್ರಜ್ಞಾನ ಜಾರಿ ಮಾಡಬೇಕು. ಅರಣ್ಯದ ಮಧ್ಯಭಾಗದಲ್ಲಿನ ಯಾವುದೇ ಹಳ್ಳ ಮತ್ತು ಕಾಲುವೆಗಳಲ್ಲಿ ನಡೆಯುವ ಮರಳುಗಣಿಗಾರಿಕೆಗೆ ಕಡಿವಾಣ ಹಾಕಬೇಕು. ಈಭಾಗದಲ್ಲಿ ವಾಸಿಸುವ ರೈತರಿಗೆ ಸಾವಯವ ಕೃಷಿ ಹಾಗೂ ತೋಟಗಾರಿಕೆಗೆ ಉತ್ತೇಜನ ನೀಡಬೇಕು.

ಪರಿಸರ ಪ್ರವಾಸೋದ್ಯಮಕ್ಕೆ ವಿಶೇಷ ನೀತಿ ರೂಪಿಸಿ ಅಕ್ರಮಗಳಿಗೆ ಕಡಿವಾಣ ಹಾಕಬೇಕು. ಗಾಂಜ ಮುಂತಾದ ನಿಷೇಧಿತ ಬೆಳೆಗಳಿಗೆ ನಿಯಂತ್ರಣ ಹೇರಬೇಕು. ಅರಣ್ಯ ಒತ್ತುವರಿ ತಡೆಗಟ್ಟಬೇಕು. ವಿವಿಧ ಯೋಜನೆಗಳಿಂದ ಸಂತ್ರಸ್ತರಾಗಿರುವ ನಿರಾಶ್ರಿತರಿಗೆ ಸೂಕ್ತ ಪುನರ್ವಸತಿ ಕಲ್ಪಿಸಬೇಕು. ಔಷಧ ಸಸ್ಯಗಳ ಅಭಿವೃದ್ಧಿಗೆ ಪ್ರೊತ್ಸಾಹ ನೀಡಬೇಕು. ನದಿ ಮೂಲಗಳನ್ನು ರಕ್ಷಣೆ ಮಾಡಬೇಕು. ಆನೆ ಕಾರಿಡಾರ್‌ಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.