ಪಕ್ಷದ ನಡೆಗೆ ಬೇಸತ್ತು ಇದೀಗ ಕಾಂಗ್ರೆಸ್ ಪಕ್ಷಕ್ಕೆ ಪ್ರಿಯಾಂಕ ಗುಡ್ ಬೈ ಹೇಳಿದ್ದಾರೆ. ಲೋಕಸಭಾ ಚುನಾವಣೆ ಬೆನ್ನಲ್ಲೇ ಶಾಕ್ ನೀಡಿದ್ದಾರೆ. 

ನವದೆಹಲಿ: ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಅವರು ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಪಕ್ಷ ತೊರೆದಿದ್ದಾರೆ. 

ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ ಕಾಂಗ್ರೆಸ್‌ ಕಾರ್ಯಕರ್ತರ ಅಮಾನತನ್ನು ತೆರವುಗೊಳಿಸಿದ್ದಕ್ಕೆ ಅಸಮಾಧಾನಗೊಂಡಿರುವ ಪ್ರಿಯಾಂಕ ಈ ಬಗ್ಗೆ ಟ್ವೀಟ್‌ ಮಾಡಿದ್ದು, ಕಷ್ಟಪಟ್ಟು ದುಡಿಯುವವರ ಬದಲು ಕೊಳಕು ಗೂಂಡಾಗಳಿಗೆ ಪಕ್ಷ ಆದ್ಯತೆ ನೀಡುತ್ತಿದೆ ಎಂದು ಕಿಡಿಕಾರಿದ್ದರು. 

ಇದೀಗ ಲೋಕಸಭಾ ಚುನಾವಣೆ ಬೆನ್ನಲ್ಲೇ ಪ್ರಿಯಾಂಕ ಚತುರ್ವೇದಿ ಕಾಂಗ್ರೆಸ್ ಪಕ್ಷದ ನಡೆಗೆ ಬೇಸತ್ತು ಗುಡ್ ಬೈ ಹೇಳಿದ್ದಾರೆ. ಅಲ್ಲದೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಕ್ತಾರೆ ಎನ್ನುವುದನ್ನು ತೆಗೆದು ಹಾಕಿದ್ದಾರೆ. 

ಇತ್ತೀಚೆಗೆ ಉತ್ತರ ಪ್ರದೇಶದ ಮಥುರಾದಲ್ಲಿ ಪತ್ರಿಕಾಗೋಷ್ಠಿ ನಡೆಸುವ ವೇಳೆ ಕೆಲ ಕಾಂಗ್ರೆಸ್‌ ಕಾರ್ಯಕರ್ತರು ಪ್ರಿಯಾಂಕಾ ಚತುರ್ವೇದಿ ಜೊತೆ ಅನುಚಿತವಾಗಿ ವರ್ತಿಸಿದ್ದರು. ಈ ಬಗ್ಗೆ ಅವರು ದೂರು ನೀಡಿದ ನಂತರ ಪಕ್ಷವು ಆ ಕಾರ್ಯಕರ್ತರನ್ನು ಅಮಾನತುಗೊಳಿಸಿತ್ತು. ಆದರೆ, ಉತ್ತರ ಪ್ರದೇಶದ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಸಿಂಧ್ಯಾ ಅವರು ಆ ಅಮಾನತು ಆದೇಶವನ್ನು ಹಿಂಪಡೆದಿದ್ದರು. ಇದಕ್ಕೆ ಪ್ರಿಯಾಂಕಾ ಕೆಂಡಾಮಂಡಲರಾಗಿದ್ದರು.

‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಬೆವರು ಮತ್ತು ರಕ್ತ ಹರಿಸಿ ಕಷ್ಟಪಟ್ಟು ದುಡಿಯುವವರ ಬದಲು ಕೊಳಕು ಗೂಂಡಾಗಳಿಗೆ ಆದ್ಯತೆ ಸಿಗುತ್ತಿರುವುದು ಬೇಸರ ತರಿಸಿದೆ. ಪಕ್ಷಕ್ಕಾಗಿ ಎಲ್ಲೆಡೆ ಸಾಕಷ್ಟುಅಡೆತಡೆಗಳನ್ನು ಎದುರಿಸಿದ್ದರೂ ನಮ್ಮದೇ ಪಕ್ಷದೊಳಗೆ ನನಗೆ ಬೆದರಿಕೆ ಹಾಕುವವರಿಗೆ ಕನಿಷ್ಠ ಪಕ್ಷ ಛೀಮಾರಿ ಕೂಡ ಹಾಕದೆ ಹಾಗೇ ಬಿಡುತ್ತಾರೆ’ ಎಂದು ಟ್ವೀಟ್‌ನಲ್ಲಿ ಪ್ರಿಯಾಂಕಾ ಅಸಮಾಧಾನ ಹೊರಹಾಕಿದ್ದರು.

Scroll to load tweet…