ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ‘ಮಿಷನ್- 150’ ಎಂದು ಎಷ್ಟೇ ಶಂಖ ಹೊಡೆಯಲಿ, ದೇವೇಗೌಡರು ನಾನು ಮಣ್ಣಿನ ಮಗ ಅಂತ ಎಷ್ಟೇ ಹೇಳಿಕೊಳ್ಳಲಿ. ಅವರು ಏನೇ ತಿಪ್ಪರಲಾಗ ಹಾಕಿದರೂ ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ: ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ‘ಮಿಷನ್- 150’ ಎಂದು ಎಷ್ಟೇ ಶಂಖ ಹೊಡೆಯಲಿ, ದೇವೇಗೌಡರು ನಾನು ಮಣ್ಣಿನ ಮಗ ಅಂತ ಎಷ್ಟೇ ಹೇಳಿಕೊಳ್ಳಲಿ. ಅವರು ಏನೇ ತಿಪ್ಪರಲಾಗ ಹಾಕಿದರೂ ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ತಾಲೂಕಿನ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಬೂತ್‌ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಸವೇಶ್ವರರ ತತ್ವಾದರ್ಶಗಳ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, 2013ರಲ್ಲಿ ನೀಡಿದ ಆಶ್ವಾಸನೆಯಂತೆ 165 ಭರವಸೆಗಳಲ್ಲಿ ನಾಲ್ಕು ವರ್ಷ ನಾಲ್ಕು ತಿಂಗಳ ಅವಧಿಯಲ್ಲಿ 155 ಅನ್ನು ಈಡೇರಿಸಿದ್ದೇವೆ ಎಂದರು.

ಅಮಿತ್ ಶಾ ವಿರುದ್ಧ ವಾಗ್ದಾಳಿ: ಅಮಿತ್ ಶಾ ಇತ್ತೀಚೆಗೆ ಬೆಂಗಳೂರಿಗೆ ಬಂದಾಗ ಪ್ರತಾಪ್ ಸಿಂಹ ಅವರನ್ನು ರಾಜ್ಯದಲ್ಲಿ ಎಷ್ಟು ಕೋಮು ಗಲಭೆ ನಡೆಸಿದ್ದೀರಿ, ಎಷ್ಟು ಜನರನ್ನು ಸಾಯಿಸಿದ್ದೀರಿ, ಎಷ್ಟು ಜನರು ಜೈಲಿಗೆ ಹೋಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇವು ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರ ಬಾಯಿಂದ ಬರುವಂತಹ ಮಾತುಗಳೇ ಎಂದು ಪ್ರಶ್ನಿಸಿದರು.

ಇನ್ನು 7-8 ತಿಂಗಳಲ್ಲಿ ಚುನಾವಣೆ ಎದುರಾಗುತ್ತಿರುವುದರಿಂದ ಬಿಜೆಪಿಯವರಿಗೆ ದಲಿತರು ನೆನಪಾಗಿದ್ದಾರೆ. ಬಿಜೆಪಿ ನಾಯಕರಿಗೆ ದಲಿತರ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ವೈವಾಹಿಕ ಸಂಬಂಧ ಬೆಳೆಸಲಿ ಎಂದಿದ್ದೆ. ಅದಕ್ಕೆ ಯಡಿಯೂರಪ್ಪ ಸುಮ್ಮನಾಗಿದ್ದಾರೆ ಎಂದು ಟೀಕಿಸಿದರು.

ಸಚಿವರಾದ ಆರ್.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ, ರಮೇಶ ಜಾರಕಿಹೊಳಿ ಕೆಪಿಸಿಸಿ ಉತ್ತರ ಕರ್ನಾಟಕ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು.