ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಯೋಜನೆಗಳು ಬಡ ಜನರ ಕೈ ತಲುಪಿ ಜನಮನ್ನಣೆ ಗಳಿಸಿರುವುದರಿಂದ ಕರ್ನಾಟಕ ರಾಜ್ಯದಲ್ಲಿ ಅಧಿಕ ಸ್ಥಾನವನ್ನು ಗಳಿಸಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಭವಿಷ್ಯ ನುಡಿದರು.
ಮೈಸೂರು (ನ.01): ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಯೋಜನೆಗಳು ಬಡ ಜನರ ಕೈ ತಲುಪಿ ಜನಮನ್ನಣೆ ಗಳಿಸಿರುವುದರಿಂದ ಕರ್ನಾಟಕ ರಾಜ್ಯದಲ್ಲಿ ಅಧಿಕ ಸ್ಥಾನವನ್ನು ಗಳಿಸಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಭವಿಷ್ಯ ನುಡಿದರು.
ಅವರು ಯಾತ್ರಿ ಭವನ ಕಲ್ಯಾಣ ಮಂಟಪದಲ್ಲಿ ನಡೆದ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿ, ಮುಂದಿನ ಸಾರ್ವತ್ರಿಕ ಚುನಾವಣೆಯು ಯುದ್ಧರಂಗವಾಗಿ ಪರಿಣಮಿಸಲಿದ್ದು ಇಡೀ ದೇಶದ ಚಿತ್ತವೇ ಕರ್ನಾಟಕದತ್ತ ಇರಲಿದೆ. ಕಾಂಗ್ರೆಸ್ ಸರ್ಕಾರ ಪಾರದರ್ಶಕ ಆಡಳಿತ ನಡೆಸುವ ಮೂಲಕ ಜನ ಪ್ರಿಯತೆಗಳಿಸಿದೆ. ಇತಿಹಾಸದಲ್ಲೇ ಯಾವ ಸರ್ಕಾರವೂ ಕೂಡ ಇಷ್ಟೊಂದು ಸಾಧನೆಯನ್ನು ಮಾಡಿಲ್ಲ ಎಂದರು.
ಮೋದಿ ಸರ್ಕಾರದ ಯಾವ ಯೋಜನೆಗಳೂ ಕೂಡ ಬಡ ಜನರ ಪರವಾಗಿಲ್ಲ ಅವರು ಹೇಳುವಂತೆಕಳೆದ ಮೂರೂವರೆ ವರ್ಷಗಳಲ್ಲಿ ಅಚ್ಛೆ ದಿನಗಳು ಬಡಜನರ ಪಾಲಿಗೆ ಬಂದಿಲ್ಲ. ಬದಲಾಗಿ ಕಾರ್ಪೊರೇಟ್ ವಲಯದ ಕೋಟ್ಯಾಧೀಶರಿಗೆ ಅಚ್ಚೆ ದಿನ ಬಂದಿದೆ. ಅವರ ಅಪನಗದೀಕರಣ ಕ್ರಮದಿಂದಾಗಿ ದೇಶದಾದ್ಯಂತ 150 ಜನರು ಕ್ಯೂನಲ್ಲಿ ನಿಂತು ಸತ್ತರು. ಇಡೀ ದೇಶದ ಆರ್ಥಿಕ ವ್ಯವಸ್ಥೆಯೇ ಬುಡಮೇಲಾಗಿದೆ. ಅಲ್ಲದೆ ಅವರು ಹೇಳಿದಂತೆ ನಕಲಿ ನೋಟುಗಳನ್ನು ಭಯೋತ್ಪಾದನೆಯನ್ನು ತಡೆಗಟ್ಟಲು ಸಾಧ್ಯವಾಗಲಿಲ್ಲ ಎಂದರು.
ಜಿಎಸ್‌ಟಿ ಒಂದು ಉತ್ತಮ ಬೆಳವಣಿಗೆ, ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಸಾಮಾನ್ಯ ಜನರು ಹೋಟೆಲ್‌ಗಳಲ್ಲಿ ಊಟ ಮಾಡಲು ಶೇ.18 ಜಿಎಸ್‌ಟಿ ತೆರಬೇಕು. ಆದರೆ ಇಂದಿರಾ ಕ್ಯಾಂಟೀನ್ ಸ್ಥಾಪನೆ ಮೂಲಕ ಶೇ.೦ ಜಿಎಸ್‌ಟಿಯಲ್ಲಿ ಬಡವರಿಗೆ ಊಟ ದೊರಕುವಂತೆ ಮಾಡಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ವೇಣುಗೋಪಾಲ್ ಶ್ಲಾಘಿಸಿದರು.
ಬಿಜೆಪಿಯ ಅಮಿತ್ ಶಾ, ಬಿಎಸ್‌ವೈ ರವರು ರಾಜ್ಯದಲ್ಲಿ ಕೋಮುವಾದ ಸೃಷ್ಟಿಸಿ ಜನರನ್ನು ಇಬ್ಭಾಗ ಮಾಡುವ ಮೂಲಕ ಕೋಮುವಾದಿ ನಡೆಯನ್ನು ಅನುಸರಿಸುತ್ತಿದೆ. ಆದರೆ ಎಲ್ಲಾ ವರ್ಗದ ಜನರಿಗೂ ಜೀವಿಸುವ ಹಕ್ಕು ನೀಡಿದ್ದು ಕಾಂಗ್ರೆಸ್ ಪಕ್ಷ ಮಾತ್ರ. ತಾಜ್‌ಮಹಲ್ ದೇಶದ ಹೆಮ್ಮಯ ಪ್ರತೀಕ ಸ್ಮಾರಕ. ಅದನ್ನು ಕಡೆಗಣಿಸುವ ಮೂಲಕ ಅಪಮಾನ ಮಾಡುತ್ತಿದೆ ಅಲ್ಲದೆ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಬಿಜೆಪಿ ವಿರೂಧಿಸುತ್ತಿದೆ. ಆದರೆ ಟಿಪ್ಪುವಿನ ಸಾಧನೆಯನ್ನು ರಾಷ್ಟ್ರಪತಿಗಳೇ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರನ್ನು ಕೋಮುವಾದ ಭಿತ್ತಿ ದೇಶವನ್ನು ಇಬ್ಬಾಗ ಮಾಡಲು ನಾವು ಬಿಡುವುದಿಲ್ಲ ಎಂದು ಗುಡುಗಿದರು. ಕಾಂಗ್ರೆಸ್ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳನ್ನು ನಾವು ಹೆಮ್ಮೆಯಿಂದ ಹೇಳಿಕೊಂಡು ಚುನಾವಣೆಗೆ ಹೋಗಬಹುದು ಮುಂದಿನ 4 ತಿಂಗಳ ಕಾಲ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ಸಾಧನೆ ಜನರಿಗೆ ಮನದಟ್ಟು ಮಾಡಬೇಕೆಂದು ಹೇಳಿದರು.
