ಒಟ್ಟು ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್‌ ಅವರ ವಿಡಿಯೋವೊಂದು ಭಾರೀ ವೈರಲ್‌ ಆಗಿದೆ. 

ಭೋಪಾಲ್‌: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್‌ ಅವರ ವಿಡಿಯೋವೊಂದು ಭಾರೀ ವೈರಲ್‌ ಆಗಿದೆ. 

ಈ ವಿಡಿಯೋದಲ್ಲಿ ‘ನಾನು ಕಾಂಗ್ರೆಸ್‌ ಪರ ಪ್ರಚಾರ, ಭಾಷಣ ಮಾಡದಿರುವುದೇ ಒಳಿತು. ಏಕೆಂದರೆ ನಾನು ಭಾಷಣ ಮಾಡಿದಷ್ಟೂಕಾಂಗ್ರೆಸ್‌ಗೆ ಮತ ಕಡಿಮೆ ಬೀಳುತ್ತದೆ. ಹೀಗಾಗಿ ಕೆಲಸ ಮಾಡದೇ ಇರುವುದೇ ನನ್ನ ಕೆಲಸ’ ಎಂದು ಸಿಂಗ್‌ ಹೇಳಿದ್ದಾರೆ. ಈ ಬಾರಿ ಚುನಾವಣೆ ದಿಗ್ವಿಜಯ್‌ ಅವರನ್ನು ಪಕ್ಷ ಕಡೆಗಣಿಸಿದ್ದೇ ಅವರ ಇಂಥದ್ದೊಂದು ವ್ಯಂಗ್ಯಕ್ಕೆ ಕಾರಣ ಎನ್ನಲಾಗಿದೆ. 

ಹೀಗಾಗಿಯೇ ಅವರು ಹೆಚ್ಚು ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದೇ ವಿಚಾರವನ್ನು ಬಳಸಿಕೊಂಡಿರುವ ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಣ್‌ ಅವರು, ‘ಒಬ್ಬ ಹಿರಿಯ ನಾಯಕರನ್ನು ಕಾಂಗ್ರೆಸ್‌ ಇಷ್ಟುತುಚ್ಛವಾಗಿ ಕಾಣುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ,’ ಎಂದು ಕಾಂಗ್ರೆಸ್‌ಗೆ ಟಾಂಗ್‌ ನೀಡಿದ್ದಾರೆ. ಇನ್ನು ದಿಗ್ವಿಜಯ್‌ ಅವರು ಯಾವ ವಿಚಾರವನ್ನಿಟ್ಟುಕೊಂಡು, ಹೀಗೆ ಹೇಳಿದ್ದಾರೆ ಎಂದು ಗೊತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕಮಲ್‌ ನಾಥ್‌ ಹೇಳಿದ್ದಾರೆ.