ರಾಷ್ಟ್ರೀಯ ಹೆದ್ದಾರಿ 13 ರ ಟೋಲ್ ಪ್ಲಾಜಾ ಸ್ಥಳಾಂತರ ಹಗರಣದ ಕುರಿತಂತೆ ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿರುವ ಕಾಂಗ್ರೆಸ್, ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಕೂಡಲೇ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದೆ.

ಬೆಂಗಳೂರು (ಜು.08):ರಾಷ್ಟ್ರೀಯ ಹೆದ್ದಾರಿ 13 ರ ಟೋಲ್ ಪ್ಲಾಜಾ ಸ್ಥಳಾಂತರ ಹಗರಣದ ಕುರಿತಂತೆ ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿರುವ ಕಾಂಗ್ರೆಸ್, ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಕೂಡಲೇ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದೆ.

ಸುವರ್ಣ ನ್ಯೂಸ್-ಕನ್ನಡಪ್ರಭದ ‘ಕವರ್ ಸ್ಟೋರಿ’ ತಂಡ ನಡೆಸಿರುವ ತನಿಖಾ ವರದಿಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಜನಪ್ರತಿನಿಧಿಯಾದವರು ಜವಾಬ್ದಾರಿಯಿಂದ ವರ್ತಿಸದಿದ್ದರೆ ಇಂತಹ ಹಗರಣ ನಡೆಯುತ್ತವೆ. ಸಚಿವ ಜಿಗಜಿಣಗಿ ಯಾರ ಒತ್ತಡಕ್ಕೆ ಒಳಗಾಗಿ ಶಿಫಾರಸು ಪತ್ರ ಕೊಟ್ಟಿದ್ದಾರೆ ಹಾಗೂ ಕೇಂದ್ರ ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಅವರಿಗೆ ಪತ್ರ ಬರೆದು ಒತ್ತಡ ಹೇರಿದ್ದಾರೆ ಎಂಬುದರ ಕುರಿತಂತೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.
‘‘ಕೇಂದ್ರ ಸಚಿವ ಜಿಗಜಿಣಗಿ ಅವರು ಪತ್ರ ಕೊಟ್ಟಿರುವುದು ಹಾಗೂ ನಕಲಿ ಸೇಲ್‌ಡೀಡ್‌ಗಳನ್ನು ಸೃಷ್ಟಿಸಿರುವುದನ್ನು ನೋಡಿದರೆ ಮೇಲ್ನೋಟಕ್ಕೆ ಭಾರಿ ಹಗರಣ ನಡೆದಿರುವುದು ಖಚಿತವಾಗುತ್ತದೆ. ಸಚಿವ ಜಿಗಜಿಣಗಿ ಅವರ ಪಾತ್ರ ಏನು ಎಂಬುದು ತನಿಖೆಯಿಂದಲೇ ಗೊತ್ತಾಗಬೇಕು. ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ತನಿಖೆ ನಡೆಸಬೇಕು’’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.


‘‘ಯಾರೇ ಜನಪ್ರತಿನಿಧಿ ಆದವರು ಶಿಫಾರಸು ಪತ್ರ ಕೊಡುವಾಗ ತುಂಬಾ ಎಚ್ಚರಿಕೆಯಿಂದ ಕೊಡಬೇಕು. ಇಂತಹ ಹಗರಣ ನಡೆದ ಬಳಿಕ ತಮ್ಮ ಗಮನಕ್ಕೆ ಬಂದೇ ಇಲ್ಲ ಎಂದು ಹೇಳುವುದು ಬೇಜವಾಬ್ದಾರಿಯಾಗುತ್ತದೆ. ಹೀಗಾಗಿ ಇಡೀ ಪ್ರಕರಣದ ತನಿಖೆ ನಡೆದರೆ ಯಾರ ಪಾತ್ರ ಏನು ಎಂಬುದು ಸ್ಪಷ್ಟವಾಗುತ್ತದೆ’’ ಎಂದು ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
‘‘ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಅಶೋಕ್ ಚವಾಣ್ ಅವರು ಆದರ್ಶ ಹೌಸಿಂಗ್ ಸೊಸೈಟಿ ಹಗರಣಕ್ಕೆ ಸಂಬಂಧಿಸಿದಂತೆ ಕೇವಲ ಒಂದು ಶಿಫಾರಸು ಪತ್ರ ಕೊಟ್ಟಿದ್ದರು ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನವನ್ನೇ ಬಿಟ್ಟುಕೊಟ್ಟರು. ಹೀಗಾಗಿ ಕೇಂದ್ರ ಸಚಿವ ಜಿಗಜಿಣಗಿ ಅವರು ಕೂಡ ತತ್‌ಕ್ಷಣ ರಾಜಿನಾಮೆ ಕೊಡಲಿ. ಸಿಬಿಐ ತನಿಖೆಯಿಂದ ಸಚಿವರ ಪಾತ್ರ ಇಲ್ಲ ಎಂಬುದಾದರೆ ನಮ್ಮ ಅಭ್ಯಂತರ ಇಲ್ಲ. ಆದರೆ ಪ್ರಜಾಪ್ರಭುತ್ವದಲ್ಲಿ ಚವಾಣ್ ಅವರಿಗೂ, ಜಿಗಜಿಣಗಿ ಅವರಿಗೂ ಒಂದೇ ನ್ಯಾಯ ಇರಬೇಕು’’ ಎಂದು ಮತ್ತೊಬ್ಬ ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್ ಆಗ್ರಹಿಸಿದ್ದಾರೆ.

‘‘ವಿಜಯಪುರ ಹೆದ್ದಾರಿ ನಿರ್ಮಾಣ ಪ್ರಕರಣದಲ್ಲಿ ಭಾರಿ ಪ್ರಮಾಣದ ಹಗರಣ ನಡೆದಿದೆ ಎಂದು ಈ ಹಿಂದೆಯೇ ನಾವು ದೂರು ನೀಡಿದ್ದೆವು. ಆದರೆ ಪ್ರಭಾವಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸಿರಲಿಲ್ಲ. ಇದೀಗ ಹಲವಾರು ಅಕ್ರಮಗಳು ದಾಖಲೆಗಳ ಸಮೇತ ಬಹಿರಂಗಗೊಂಡಿವೆ. ಹೀಗಾಗಿ ಕೇಂದ್ರ ಸಚಿವ ಸ್ಥಾನಕ್ಕೆ ರಮೇಶ ಜಿಗಜಿಣಗಿ ಅವರು ಕೂಡಲೇ ರಾಜಿನಾಮೆ ನೀಡಬೇಕು ಹಾಗೂ ಹಗರಣದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’’ ಎಂದು ವಿಧಾನ ಪರಿಷತ್‌ನ ಮಾಜಿ ಸಚಿವ ಪ್ರಕಾಶ್ ರಾಠೋಡ್ ಒತ್ತಾಯಿಸಿದ್ದಾರೆ.

ಬಿಜೆಪಿಯಲ್ಲೂ ಅಪಸ್ವರ
ಸಾರ್ವಜನಿಕ ಜೀವನದಲ್ಲಿ ಯಾವುದೇ ಪಕ್ಷದವರು ತಪ್ಪು ಮಾಡಿದರೂ ಅದು ತಪ್ಪೇ. ಹೆದ್ದಾರಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ನಡೆಸಲು ಅಕ್ರಮ ಸೇಲ್‌ಡೀಡ್ ಬಳಕೆ ಮಾಡಿರುವ ಪ್ರಕರಣದಲ್ಲಿ ಎಷ್ಟೇ ಪ್ರಭಾವಿಗಳು ಭಾಗಿಯಾಗಿದ್ದರೂ ಅವರಿಗೆ ಶಿಕ್ಷೆ ಆಗಬೇಕು. ಲಭ್ಯ ದಾಖಲೆಗಳ ಪ್ರಕಾರ, ಹಗರಣ ನಡೆದಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಹೀಗಾಗಿ ಪ್ರಕರಣದ ಸಮಗ್ರ ತನಿಖೆ ನಡೆಯಲೇಬೇಕು ಎಂದು ಬಿಜೆಪಿ ಮುಖಂಡ, ಮಾಜಿ ಎಮ್ಮೆಲ್ಸಿ ಗೋ.ಮಧುಸೂದನ್ ಒತ್ತಾಯಿಸಿದ್ದಾರೆ.