ಜಿಲ್ಲೆಯ ಏಳೂ ಕ್ಷೇತ್ರಗಳು ಜೆಡಿಎಸ್ ಪಾಲಾಗುವ ಭೀತಿ | ಹಾಗಾಗಿ, ರಮ್ಯಾ ಮನವೊಲಿಕೆಗೆ ಮುಂದಾದ ಕಾಂಗ್ರೆಸ್
ಬೆಂಗಳೂರು: ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ರಾಜ್ಯ ಕಾಂಗ್ರೆಸ್ ನಾಯಕತ್ವವು ಎಐಸಿಸಿ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾರನ್ನು ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದ ಕ್ಷೇತ್ರವೊಂದರಿಂದ ಸ್ಪರ್ಧಿಸುವಂತೆ ಮನವೊಲಿಸಲು ಮುಂದಾಗಿದೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.
ಮುಂದಿನ ಸಂಸದೆಯಾಗಿ ಕೇಂದ್ರ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ಅಣಿಯಾಗಿರುವ ರಮ್ಯಾ ಅವರನ್ನು ರಾಜ್ಯ ರಾಜಕಾರಣಕ್ಕೆ ಸೆಳೆಯುವ ಯತ್ನದ ಹಿಂದಿನ ಕಾರಣ- ಮಂಡ್ಯ ಜಿಲ್ಲೆ ಸಂಪೂರ್ಣ ಕಾಂಗ್ರೆಸ್ ಕೈ ಬಿಡುವ ಭೀತಿ! ಕಾಂಗ್ರೆಸ್ ನಾಯಕತ್ವ ಮಂಡ್ಯ ಜಿಲ್ಲೆಯಲ್ಲಿ ನಡೆಸಿರುವ ಸಮೀಕ್ಷೆ ಪ್ರಕಾರ ಇಡೀ ಜಿಲ್ಲೆಯ ಅಷ್ಟು ಏಳು ಕ್ಷೇತ್ರಗಳಲ್ಲಿ ಈ ಬಾರಿ ಕಾಂಗ್ರೆಸ್ ಗೆಲುವು ಮರೀಚಿಕೆ. ಜಿಲ್ಲೆಯಲ್ಲಿ ಈ ಬಾರಿ ಜೆಡಿಎಸ್ ವಿಜೃಂಭಿಸಲಿದೆ. ಮಂಡ್ಯ ಜಿಲ್ಲೆಯಿಂದ ಈ ಬಾರಿ ಜೆಡಿಎಸ್‌ನ ಇಬ್ಬರು ಶಾಸಕರು (ರಮೇಶ್ ಬಂಡಿ ಸಿದ್ದೇಗೌಡ - ಶ್ರೀರಂಗಪಟ್ಟಣ ಹಾಗೂ ಚೆಲುವರಾಯಸ್ವಾಮಿ-ನಾಗಮಂಗಲ) ಕಾಂಗ್ರೆಸ್’ಗೆ ವಲಸೆ ಬಂದಿದ್ದರೂ, ನಟ ಅಂಬರೀಶ್ ಈ ಬಾರಿ ಚುನಾವಣೆಗೆ ನಿಂತರೂ ಸಹ ಇಡೀ ಜಿಲ್ಲೆ ಕಾಂಗ್ರೆಸ್‌ನ ಕೈ ಬಿಟ್ಟು ಹೋಗಲಿದೆ ಎಂದು ಸಮೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ ಎನ್ನುತ್ತವೆ ಮೂಲಗಳು.
ಪ್ರಸ್ತುತ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಎರಡು ಕ್ಷೇತ್ರ (ಮಳವಳ್ಳಿ ಹಾಗೂ ಮಂಡ್ಯ) ಜೆಡಿಎಸ್ ನಾಲ್ಕು ಕ್ಷೇತ್ರಗಳಲ್ಲಿ ( ಶ್ರೀರಂಗಪಟ್ಟಣ, ನಾಗಮಂಗಲ, ಮದ್ದೂರು ಹಾಗೂ ಕೆಆರ್ ಪೇಟೆ) ಹಾಗೂ ಪಕ್ಷೇತರ (ಮೇಲುಕೋಟೆ) ಗೆಲುವು ಸಾಧಿಸಿದ್ದರು. ಆದರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಶೂನ್ಯ ಸಂಪಾದನೆಯಾಗಲಿದೆ ಎಂಬ ವರದಿಯಿಂದ ಗಾಬರಿಗೊಂಡ ರಾಜ್ಯ ನಾಯಕತ್ವ ಇಂತಹ ಪರಿಸ್ಥಿತಿಯಿಂದ ಹೊರಬರಲು ಏನು ಮಾಡಬೇಕು ಎಂಬ ಬಗ್ಗೆಯೂ ಸಮೀಕ್ಷೆ ನಡೆಸಿದ ಸಂಸ್ಥೆಯಿಂದ ಸಲಹೆ ಕೋರಿತ್ತು.
ಈ ಸಂಸ್ಥೆ ಜಿಲ್ಲೆಯ ಜನರ ಅಭಿಪ್ರಾಯ ಸಂಗ್ರಹಿಸಿದ ನಂತರ ರಮ್ಯಾ ಅವರನ್ನು ಮತ್ತೆ ಮಂಡ್ಯ ಜಿಲ್ಲೆಯಲ್ಲಿ ವಿಧಾನಸಭೆಗೆ ಸ್ಪರ್ಧಿಸುವಂತೆ ಮಾಡಿದರೆ ಕಾಂಗ್ರೆಸ್‌ನ ಪರಿಸ್ಥಿತಿ ಒಂದಷ್ಟು ಉತ್ತಮಗೊಳ್ಳುವ ಸಾಧ್ಯತೆಯಿದೆ ಎಂದು ವರದಿ ನೀಡಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ರಾಜ್ಯ ರಾಜಕಾರಣಕ್ಕೆ ಆಗಮಿಸುವ ಮನಸ್ಥಿತಿಯಲ್ಲಿ ಇಲ್ಲದ ರಮ್ಯಾ ಅವರನ್ನು ಕರೆತರಲು ರಾಜ್ಯ ನಾಯಕತ್ವ ಸಜ್ಜಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮದ್ದೂರೋ, ಮೇಲುಕೋಟೆಯೋ?: ಈ ಮೂಲಗಳ ಪ್ರಕಾರ ಮದ್ದೂರು (ಒಂದು ಕಾಲದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಸ್ವಕ್ಷೇತ್ರ) ಅಥವಾ ಮೇಲುಕೋಟೆಯಿಂದ ಸ್ಪರ್ಧಿಸುವಂತೆ ರಮ್ಯಾ ಅವರ ಮನವೊಲಿಸಲು ರಾಜ್ಯ ನಾಯಕತ್ವ ಮುಂದಾಗಿದೆ. ಒಂದು ವೇಳೆ ರಮ್ಯಾ ಅವರು ಮಂಡ್ಯ ಜಿಲ್ಲೆಯ ಕ್ಷೇತ್ರವೊಂದರಿಂದ ವಿಧಾನಸಭೆಗೆ ಸ್ಪರ್ಧಿಸಿದರೆ, ಅದರ ಪರಿಣಾಮ ಇತರ ಕ್ಷೇತ್ರಗಳ ಮೇಲೂ ಆಗುತ್ತದೆ. ಮಹಿಳಾ ಮತದಾರರ ಒಲವು ಹೊಂದಿರುವ ರಮ್ಯಾ ಅವರು ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಸ್ಥಿತಿ ಉತ್ತಮ ಪಡಿಸಬಹುದು ಎಂಬುದು ಕಾಂಗ್ರೆಸ್ ನಾಯಕತ್ವದ ಲೆಕ್ಕಾಚಾರ.
ಆದರೆ, ಪ್ರಸ್ತುತ ಎಐಸಿಸಿ ಸೋಷಿಯಲ್ ಮೀಡಿಯಾದ ಮುಖ್ಯಸ್ಥೆಯಾಗಿ ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವ ರಮ್ಯಾ ಅವರು ರಾಜ್ಯ ರಾಜಕಾರಣಕ್ಕೆ ಹಿಂತಿರುಗುವ ಮನಸ್ಥಿತಿ ಹೊಂದಿದ್ದಾರೆಯೇ ಮತ್ತು ರಾಜ್ಯ ನಾಯಕತ್ವ ಅವರ ಮನವೊಲಿಸಲು ಯಶಸ್ವಿಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕು.
