ನವದೆಹಲಿ(ಫೆ.21): ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ, ಪಕ್ಷ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿದ್ದಾರೆ.

ಆದರೆ ಕಾಂಗ್ರೆಸ್ ನಾಯಕರು ಮಾತ್ರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆರೋಪ ಮಾಡುವುದನ್ನು ಮುಂದುವರೆಸಿದ್ದಾರೆ. ಇಡೀ ದೇಶವೇ ಭಯೋತ್ಪಾದನೆ ದಾಳಿಗೆ ತತ್ತರಿಸಿ ಹೋಗಿರುವಾಗ, ಪ್ರಧಾನಿ ನರೇಂದ್ರ ಮೋದಿ ಮಾತ್ರ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ತಮ್ಮ ಸರ್ಕಾರದ ಪ್ರಚಾರ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ನವದೆಹಲಿಯಲ್ಲಿ ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ರಣ್‌ದೀಪ್ ಸುರ್ಜೆವಾಲಾ, ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಅಲ್ಲದೇ ನಿನ್ನೆ ಸೌದಿ ಅರೇಬಿಯಾದ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಜೊತೆ ಮಾತುಕತೆ ನಡೆಸಿದ ನಂತರ, ಪ್ರಧಾನಿ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಭಯೋತ್ಪಾದನೆಯನ್ನು ಬೆಳೆಸಿದ ಪಾಕಿಸ್ತಾನದ ಹೆಸರನ್ನು ಬರೆಯುವುದನ್ನೇ ಮರೆತಿದ್ದಾರೆ ಎಂದು ಸುರ್ಜೆವಾಲಾ ಆರೋಪಿಸಿದರು.

ಪುಲ್ವಾಮಾ ದಾಳಿ ದೇಶದ ಐಕ್ಯತೆ, ಸಮಗ್ರತೆ ಮೇಲೆ ಬಿದ್ದ ಪೆಟ್ಟಾಗಿದ್ದು,  ದೇಶದ ಭದ್ರತೆ ಕಾಪಾಡುವಲ್ಲಿ ವಿಫಲರಾದ ಪ್ರಧಾನಿ ಕೂಡಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ದೇಶದಲ್ಲಿ ಆಕ್ರೋಶ ಭುಗಿಲೆದ್ದಿರುವಾಗ ನಗುತ್ತಾ  ಪಾರ್ಕ್‌ನಲ್ಲಿ ಕಾಲಹರಣ ಮಾಡುವ ಪ್ರಧಾನಿ ಅವರನ್ನು ಎಲ್ಲಾದರೂ ಕಂಡಿದ್ದೀರಾ ಎಂದು ಸುರ್ಜೆವಾಲಾ ಕಿಡಿಕಾರಿದರು.