ಪಣಜಿ(ಮಾ.17): ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಸರ್ಕಾರ ರಚನೆಗೆ ತಮಗೆ ಅವಕಾಶ ನೀಡಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಗೋವಾ ರಾಜ್ಯಪಾಲರಿಗೆ ಪತ್ರ ಬರೆದಿದೆ.

ಕಾಂಗ್ರೆಸ್ ಗೋವಾದಲ್ಲಿ ಸರ್ಕಾರ ರಚಿಸಲು ಅವಕಾಶ ನೀಡಿ ಎಂದು ರಾಜ್ಯಪಾಲೆ ಮೃದುಲಾ ಸಿನ್ಹಾ ಅವರಿಗೆ ಪ್ರತಿಪಕ್ಷ ನಾಯಕ ಚಂದ್ರಕಾಂತ್ ಕಾವ್ಲೇಕರ್ ಪತ್ರ ಬರೆದಿದ್ದಾರೆ.

'ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಬಹುಮತವಿಲ್ಲ. ಬಿಜೆಪಿ ಸರ್ಕಾರವನ್ನು ವಜಾಗೊಳಿಸಿ ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡಿ' ಎಂದು ಕಾವ್ಲೇಕರ್ ಮನವಿ ಮಾಡಿದ್ದಾರೆ.

ಬಿಜೆಪಿ ಶಾಸಕ ಫ್ರಾನ್ಸಿಸ್ ಡಿ ಸೋಜಾ ನಿಧನರಾದ ಬಳಿಕ ಪರಿಕ್ಕರ್ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಸಿಎಂ ಮನೋಹರ್ ಪರಿಕ್ಕರ್ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಸರ್ಕಾರ ರಚನೆಗೆ ಅವಕಾಶ ಮಾಡಿ ಕೊಡಬೇಕು ಎಂದು ಕಾವ್ಲೇಕರ್ ಪತ್ರದಲ್ಲಿ ತಿಳಿಸಿದ್ದಾರೆ.

ಇತ್ತ ಪರಿಕ್ಕರ್ ಆರೋಗ್ಯ ಬಿಗಡಾಯಿಸಿದ ಪರಿಣಾಮ ಹೊಸ ಸಿಎಂ ಹುಡುಕಾಟದಲ್ಲಿ ಬಿಜೆಪಿ ನಿರತವಾಗಿದ್ದು, ಶೀಘ್ರದಲ್ಲೇ ನೂತನ ಸಿಎಂ ಘೋಷಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.