ಎಲ್. ಹನುಮಂತಯ್ಯಗೂ ಕೊಕ್ ಹಿರಿಯ ನಾಯಕರ ಮಕ್ಕಳಿಗೆ ಸ್ಥಾನ ಕೆಪಿಸಿಸಿಯಲ್ಲಿ ಗುಂಪುಗಾರಿಕೆ? 

ಬೆಂಗಳೂರು: ಚುನಾವಣೆ ಸಮೀಪಿಸಿರುವ ಈ ಹಂತದಲ್ಲಿ ತನ್ನ ವಕ್ತಾರರು ಹಾಗೂ ಮಾಧ್ಯಮ ಪ್ಯಾನಲಿಸ್ಟ್‌ಗಳ ಪಟ್ಟಿಯನ್ನು ಪರಿಷ್ಕರಿಸಿರುವ ಕೆಪಿಸಿಸಿ ನಾಯಕತ್ವ, ಪಕ್ಷ ಹಾಗೂ ಸರ್ಕಾರ ಇಕ್ಕಟ್ಟಿಗೆ ಸಿಲುಕಿದಾಗ ತಮ್ಮ ಸಮರ್ಥ ಮಾತುಗಾರಿಕೆ ಮೂಲಕ ನೆರವಿಗೆ ಧಾವಿಸುತ್ತಿದ್ದ ಘಟಾನುಘಟಿಗಳನ್ನು ಹೊರಗಿಟ್ಟಿದೆ. ತನ್ಮೂಲಕ ಕೆಪಿಸಿಸಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಶ ರವಾನೆಯಾಗಲು ಕಾರಣವಾಗಿದೆ.

ರಾಜ್ಯ ಸರ್ಕಾರ ಹಾಗೂ ಪಕ್ಷದ ಪರ ಸದಾ ನಿಲ್ಲುತ್ತಿದ್ದ ಹಿರಿಯ ಮುಖಂಡರಾದ ಬಿ.ಎಲ್. ಶಂಕರ್, ವಿ.ಆರ್. ಸುದರ್ಶನ್ ಹಾಗೂ ಎಲ್. ಹನುಮಂತಯ್ಯ ಅವರನ್ನು ಕೆಪಿಸಿಸಿ ವಕ್ತಾರರ ಪಟ್ಟಿಯಿಂದ ಹೊರಗಿಡಲಾಗಿದೆ.

ಬದಲಾಗಿ, ಮಾರ್ಗರೆಟ್ ಆಳ್ವ ಅವರ ಪುತ್ರ ನಿವೇದಿತ್ ಆಳ್ವ, ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ, ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿ, ದೇಶಪಾಂಡೆ ಪುತ್ರ ಪ್ರಶಾಂತ್ ದೇಶಪಾಂಡೆ, ಮೋಟಮ್ಮ ಪುತ್ರಿ ನಯನಾ ಝವಾರ್, ಡಿ.ಬಿ. ಚಂದ್ರೇಗೌಡ ಪುತ್ರಿ ವೀಣಾ ಗೌಡ, ಲಾವಣ್ಯ ಬಲ್ಲಾಳ್, ಮಂಜುಳಾ ಮಾನಸ, ತಾಯಪ್ಪ ಪವಾರ್‌ರಂತಹ ಅನನುಭವಿಗಳಿರುವ 32 ಮಂದಿ ವಕ್ತಾರರು ಹಾಗೂ 14 ಮಂದಿ ಮೀಡಿಯಾ ಪ್ಯಾನಲಿಸ್ಟ್‌ಗಳನ್ನು ನೇಮಕ ಮಾಡಲಾಗಿದೆ.

ಕೆಪಿಸಿಸಿ ಸಂವಹನ ವಿಭಾಗ ಎಂಬ ಹೆಸರಿನಲ್ಲಿ ವಕ್ತಾರರು ಹಾಗೂ ಮಾಧ್ಯಮ ಪ್ಯಾನಲಿಸ್ಟ್‌ಗಳ ಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, ಹಲವು ಹಿರಿಯರನ್ನು ಹೊರಗಿಡ ಲಾಗಿದೆ. ಯುವಕರಿಗೆ ಆದ್ಯತೆ ನೀಡಲಾಗಿದೆ ಎಂಬ ಸಮರ್ಥನೆಯೊಂದಿಗೆ ಪಕ್ಷದ ಸಮರ್ಥ ನಾಯಕರನ್ನು ವಕ್ತಾರರ ಹುದ್ದೆಯಿಂದ ಹೊರಗಿಟ್ಟಿರುವುದಕ್ಕೆ ಪಕ್ಷದಲ್ಲಿ ತೀವ್ರ ಅಸಮಾಧಾನ ಮೂಡಿದೆ. ಹೊಸ ತಂಡದಲ್ಲಿ ವಕೀಲರು, ಸಾಮಾಜಿಕ ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್‌ಗಳು, ಐಟಿ ವೃತ್ತಿಪರರು, ಕಲಾವಿದರು, ಬರಹಗಾರರು ಇದ್ದಾರೆ. ಈ ಸಮಿತಿಯಲ್ಲಿ ಶೇ. 30 ಮಂದಿ 40 ವರ್ಷದೊಳಗಿನವರಾಗಿದ್ದಾರೆ.

ರಾಹುಲ್ ಆಶಯದಂತೆ ಯುವಕರು ಹಾಗೂ ಹಿರಿಯರನ್ನು ಒಳಗೊಂಡಿರುವ ತಂಡವನ್ನು ಕಟ್ಟಲಾಗಿದೆ ಎಂದು ಸಮರ್ಥಿಸಿಕೊಳ್ಳಲಾಗಿದೆ. ಆದರೆ, ಮಾಧ್ಯಮಗಳಲ್ಲಿ ಪಕ್ಷವನ್ನು ಸಮರ್ಥವಾಗಿ ಸಮರ್ಥಿಸಿಕೊಳ್ಳುವ ಹಾಗೂ ಯಾವುದೇ ವಿಷಯದಲ್ಲಿ ಆಳವಾದ ಜ್ಞಾನ ಹೊಂದಿರುವ ಬಿ.ಎಲ್. ಶಂಕರ್, ಸುದರ್ಶನ್ ಹಾಗೂ ಹನುಮಂತಯ್ಯ ಅವರನ್ನು ಈ ಪಟ್ಟಿಯಿಂದ ಹೊರಗಿಟ್ಟಿರುವುದರ ಹಿಂದೆ ಪಕ್ಷದೊಳಗಿನ ಗುಂಪುಗಾರಿಕೆ ಕೆಲಸ ಮಾಡಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.