ರಾಜಸ್ಥಾನ ವಿಧಾನಸಭಾ ಚುನಾವಣೆ 2018ಕ್ಕೆ ಕಾಂಗ್ರೆಸ್ ಕೊನೆಗೂ ತನ್ನ ಚುನಾವಣಾ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ತಡರಾತ್ರಿಯವರೆಗೆ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ 152 ಅಭ್ಯರ್ಥಿಗಳ ಹೆಸರಿನ ಪಟ್ಟಿಗೆ ಸಮ್ಮತಿ ಸಿಕ್ಕಿದೆ. ಸಚಿನ್ ಪಾಯ್ಲೆಟ್ ಟೋಂಕ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಸರ್ದಾರ್‌ಪುರದಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸ್ಪರ್ಧಿಸಿದರೆ, ಸಿಪಿ ಜೋಶಿಯವರಿಗೆ ನಾಥದ್ವಾರದಿಂದ ಟಿಕೆಟ್ ನೀಡಲಾಗಿದೆ. ಇನ್ನು ಬುಧವಾರವಷ್ಟೇ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಸಂಸದ ಹರೀಶ್ ಮೀಣಾರವರಿಗೂ ಕೇವಲ ಒಂದು ಗಂಟೆಯೊಳಗೆ ದೇವಲಿ ಉನಿಯಾರಾದ ಟಿಕೆಟ್ ನೀಡಿರುವುದು ಅಚ್ಚರಿ ಮೂಡಿಸಿದೆ.

ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಇಬ್ಬರು ಶಾಸಕರ ಹೆಸರನ್ನು ತೆಗೆದು ಹಾಕಲಾಗಿದೆ. ಝಾಡೋಲ್‌ನಿಂದ ಹೀರಾಲಾಲ್ ದರಾಂಗಿ ಹಾಗೂ ಟೋಡಾಭೀಮ್‌ನಿಂದ ಘನ್‌ಶ್ಯಾಮ್ ಮೆಹರ್‌ರವರ ಟಿಕೆಟ್ ಹಿಂಪಡೆಯಲಾಗಿದೆ. ದರಾಂಗಿಯವರ ಸ್ಥಾನಕ್ಕೆ ಝಾಡೋಲ್‌ನಿಂದ ಸುನೀಲ್ ಬಜಾತ್‌ರನ್ನು ಕಣಕ್ಕಿಳಿಸುತ್ತಿದ್ದರೆ, ಟೋಡಾಭೀಮ್‌ನಿಂದ ಪೃಶ್ವಿರಾಜ್ ಮೀಣಾರಿಗೆ ಟಿಕೆಟ್ ನೀಡಲಾಗಿದೆ. ರಾಜ್ಯದ 200 ವಿಧಾನಸಭಾ ಕ್ಷೇತ್ರಗಳಿಗೆ ಬಾಕಿ ಉಳಿದ 48 ಅಭ್ಯರ್ಥಿಗಳ ಹೆಸರನ್ನು ಶುಕ್ರವಾರದೊಳಗೆ ಪಕ್ಷವು ಘೋಷಿಸಲಿದೆ. 

ಪಟ್ಟಿ ತಯಾರಿಸುವುದು ಕಾಂಗ್ರೆಸ್‌ಗೆ ಅತ್ಯಂತ ಕಠಿಣ ಕೆಲಸವಾಗಿತ್ತು. ಬೆಳಗ್ಗಿನಿಂದಲೇ ಅಭ್ಯರ್ಥಿಗಳ ಹೆಸರು ಫೈನಲ್ ಮಾಡಲು ಸಭೆಗಳ ಮೇಲೆ ಸಭೆಗಳು ನಡೆದಿದ್ದವು. ಕೊನೆಗೂ ನಿನ್ನೆ ತಡರಾತ್ರಿ ಸುಮಾರು 12.30ಕ್ಕೆ ಈ ಪಟ್ಟಿ ಅಂತಿಮಗೊಂಡಿದ್ದು, ಎಲ್ಲರ ಒಪ್ಪಿಗೆಯೂ ಸಿಕ್ಕಿದೆ.

ಈ ಹಿಂದೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಸಚಿನ್ ಪಾಯ್ಲೆಟ್ ’ಟಿಕೆಟ್ ಹಂಚಿಕೆ ವಿಚಾರವಾಗಿ ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರ ನಿರ್ಧಾರದಂತೆ ಇಲ್ಲಿನ ಯುವಕರು, ಮಹಿಳೆಯರು, ರೈತರು ಹಾಗೂ ಸಮಾಜದ ಎಲ್ಲಾ ವರ್ಗದ ಪ್ರತಿನಿಧಿಗಳಿಗೆ ಈ ಪಟ್ಟಿಯಲ್ಲಿ ಸ್ಥಾನ ನೀಡಲಾಗುತ್ತದೆ’ ಎಂದಿದ್ದರು.

ಕಳೆದ 5 ದಿನಗಳಿಂದ ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸುವುದಕ್ಕೆ ಸಂಬಂಧಿಸಿದಂತೆ ನಿರಂತರ ಮಾತುಕತೆ ನಡೆಯುತ್ತಿತ್ತು. ಬುಧವಾರದಂದು ಸಾಮಾಜಿಕ ತಾಣಗಳಲ್ಲಿ ಅಭ್ಯರ್ಥಿಗಳ ಪಟ್ಟಿಯೊಂದು ವೈರಲ್ ಆಗಿದ್ದು, ಇದರಲ್ಲಿ 109 ಮಂದಿಗಳ ಹೆಸರಿತ್ತು. 5 ಪುಟಗಳಿದ್ದ ಈ ಪಟ್ಟಿಯಲ್ಲಿ ಕಾಂಗ್ರೆಸ್‌ನ ಜನರಲ್ ಸೆಕ್ರೆಟರಿ ಮುಕುಲ್ ವಾಸನಿಕ್ ಹಸ್ತಾಕ್ಷರವಿದ್ದ ಕಾರಣ ಪಕ್ಷದ ಟಿಕೆಟ್ ಆಕಂಕ್ಷಿಗಳಲ್ಲಿ ಗೊಂದಲವೇರ್ಪಟ್ಟಿತ್ತು. ಆದರೆ ಕೆಲವೇ ಸಮಯದ ಬಳಿಕ ಪಕ್ಷವು ಇದು ನಕಲಿ ಪಟ್ಟಿ ಎಂಬ ಸ್ಪಷ್ಟನೆ ನೀಡಿತ್ತು.