ಹುಬ್ಬಳ್ಳಿ-ಧಾರವಾಡ :  ಬೇಷರತ್‌ ಬೆಂಬಲ ನೀಡಿದ್ದ ಕಾಂಗ್ರೆಸ್‌ ಇದೀಗ ದಿನಕ್ಕೊಂದು ಷರತ್ತು ವಿಧಿಸುವ ಹಾಗೂ ಕಾನೂನು ತರುವ ಮೂಲಕ ಈ ರೀತಿ ಕಿರುಕುಳ ಮುಂದುವರಿಸಿದರೆ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಾರದು ಎಂದು ವಿಧಾನಪರಿಷತ್‌ ಸದಸ್ಯ, ಜೆಡಿಎಸ್‌ ಹಿರಿಯ ಮುಖಂಡ ಬಸವರಾಜ ಹೊರಟ್ಟಿಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಸಕ್ತರಾಗಿದ್ದಾರೆ. ಆದರೆ ಕಾಂಗ್ರೆಸ್‌ ಪಕ್ಷದವರ ಕಿರುಕುಳದಿಂದ ಉತ್ತರ ಕರ್ನಾಟಕ ಶಾಸಕರಿಗೆ ಸಚಿವ ಸ್ಥಾನ ಕೈತಪ್ಪಿದೆ. ಅದರಲ್ಲೂ ಲಿಂಗಾಯತ ಶಾಸಕರಿಗೆ ಕಾಂಗ್ರೆಸ್‌ ಪಕ್ಷವೂ ಸಚಿವ ಸ್ಥಾನ ನೀಡದೇ ನಿರ್ಲಕ್ಷ್ಯ ತೋರಿದೆ. ಕಾಂಗ್ರೆಸ್‌ನವರ ಕಿರುಕುಳದಿಂದಲೇ ಕುಮಾರಸ್ವಾಮಿ ಒಂದು ವರ್ಷ ನನ್ನನ್ನು ಯಾರೂ ಟಚ್‌ ಮಾಡಕ್ಕಾಗೋಲ್ಲ ಎಂದು ಹೇಳಿದ್ದು, ಅವರಿಗೂ ಬೇಸರವಾಗಿದೆ. ಇದಕ್ಕೆ ಕಾರಣವೂ ಇದೆ. ಸದ್ಯ ಮುಖ್ಯಮಂತ್ರಿಗಳಿಗೆ ಮುಕ್ತವಾದ ವಾತಾವರಣ ಬೇಕಿದೆ ಎಂದರು.

ಪ್ರತ್ಯೇಕ ರಾಜ್ಯದ ಕೂಗಿಗೆ ಪುಷ್ಟಿ: ಇಂತಹ ಘಟನೆಗಳೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಡಿಗೆ ಪುಷ್ಟಿನೀಡುತ್ತವೆ. ಉತ್ತರ ಕರ್ನಾಟಕದ ಮಂದಿಯೂ ಇಂತಹ ಬೆಳವಣಿಗೆಯಿದ ಬೇಸತ್ತಿದ್ದಾರೆ ಎಂದರು.

ಲಿಂಗಾಯತ ಹೋರಾಟದಿಂದ ಸಚಿವ ಸ್ಥಾನಕ್ಕೆ ಕೊಕ್ಕೆ: ಲಿಂಗಾಯತ ಧರ್ಮ ಹೋರಾಟದ ಮುಂಚೂಣಿಯಲ್ಲಿ ನಿಂತಿದ್ದರಿಂದ ಮಂತ್ರಿಗಿರಿಯಿಂದ ವಂಚಿತನಾದೆ. ಅಂದು ನನ್ನನ್ನು ಹೋರಾಟಕ್ಕೆ ಹುರಿದುಂಬಿಸಿದ ಲಿಂಗಾಯತ ಮುಖಂಡರಾರ‍ಯರೂ ಈಗ ನನ್ನ ಬೆನ್ನಿಗೆ ನಿಲ್ಲಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನನ್ನ ಹೋರಾಟ ಏನಿದ್ದರೂ ಸಮಾಜಕ್ಕಾಗಿ. ವೈಯಕ್ತಿಕ ಹಿತಾಸಕ್ತಿಏನೂ ಇರುವುದಿಲ್ಲ. ಸಮಸ್ತ ಲಿಂಗಾಯತ ಸಮಾಜದ ಹೊಸ ಪೀಳಿಗೆಗೆ ಅನುಕೂಲವಾಗುತ್ತದೆ ಎನ್ನುವ ಕಾರಣಕ್ಕೆ ಹೋರಾಟದಲ್ಲಿ ಧುಮುಕಿದೆ. ಕೆಲವು ಮಠಾಧೀಶರು ತಮ್ಮ ಸ್ವಾರ್ಥಕ್ಕಾಗಿ ನಮ್ಮ ವಿರುದ್ಧ, ಹೋರಾಟದ ವಿರುದ್ಧ ಅಪಪ್ರಚಾರ ಮಾಡಿದರು. ಇಂದು ಸತ್ಯ ಹೇಳುವುದೇ ಕಷ್ಟವಾಗಿದೆ ಎಂದರು.

ಮಾಜಿ ಸಚಿವ ಎಂಬುದು ಕಾಯಂ: ಮೇಲ್ಮನೆಯ ಹಿರಿಯ ಸದಸ್ಯ ನಾನು. ನನಗೆ ಮಂತ್ರಿ ಸ್ಥಾನ ನೀಡಿದ್ದರೆ ಜನತೆಗೆ ಒಂದಿಷ್ಟು ಒಳ್ಳೆಯದನ್ನು ಮಾಡುತ್ತಿದ್ದೆ. ಇದರಿಂದ ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತಿತ್ತು. ಆದರೆ ಮಂತ್ರಿಗಿರಿಗೆ ಮಾನದಂಡಗಳು ಬೇರೆಯಾಗಿವೆ. ಹಿಂದೆ ನಾನು ಮಂತ್ರಿಯಾಗಿ ಕೆಲಸ ಮಾಡಿ ಈಗ ಮಾಜಿ ಆಗಿದ್ದೇನೆ. ಮಾಜಿ ಎನ್ನುವುದು ಕಾಯಂ. ನನ್ನ ಜತೆಯಲ್ಲಿ ಬಸವಣ್ಣ ಇದ್ದಾನೆ. ನನಗೆ ಶಕ್ತಿ ಇರುವವರೆಗೆ ಬಸವಣ್ಣ ಮತ್ತು ಜನರ ಸೇವೆ ಮಾಡುತ್ತೇನೆ ಎಂದರು. 

ಹಿಂದೆ ಮಹಾರಾಷ್ಟ್ರದಲ್ಲಿ ಎನ್‌ಸಿಪಿ-ಕಾಂಗ್ರೆಸ್‌ ಮೈತ್ರಿ ಸರ್ಕಾರ ನಡೆದಂತೆ ಸುದೀರ್ಘ ಅವಧಿಗೆ ನಮ್ಮ ಸಮ್ಮಿಶ್ರ ಸರ್ಕಾರ ನಡೆಸುವ ಬಯಕೆಯನ್ನು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಎರಡೂ ಪಕ್ಷಗಳು ಹೊಂದಿವೆ. 10 ವರ್ಷಗಳ ಕಾಲ ಕಾಂಗ್ರೆಸ್‌ ಜೊತೆಯಲ್ಲಿ ಸರ್ಕಾರ ನಡೆಸುವ ವಿಶ್ವಾಸ ನನಗಿದೆ. ಆದರೆ, ಮಾಧ್ಯಮಗಳು ಈ ಬಗ್ಗೆ ಗೊಂದಲ ಸೃಷ್ಟಿಸುತ್ತಿವೆ.

- ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ