ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಾಂಗ್ರೆಸ್‌ ಪಕ್ಷ, ಮತ್ತೊಂದು ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತನ್ನ ಬೊಕ್ಕಸಕ್ಕೆ ದೇಣಿಗೆ ಸಂಗ್ರಹಿಸಲು ಮತದಾರರ ಮನೆಬಾಗಿಲಿಗೆ ತೆರಳಲು ನಿರ್ಧರಿಸಿದೆ.

ನವದೆಹಲಿ: 2014ರ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ಬಳಿಕ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಾಂಗ್ರೆಸ್‌ ಪಕ್ಷ, ಮತ್ತೊಂದು ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತನ್ನ ಬೊಕ್ಕಸಕ್ಕೆ ದೇಣಿಗೆ ಸಂಗ್ರಹಿಸಲು ಮತದಾರರ ಮನೆಬಾಗಿಲಿಗೆ ತೆರಳಲು ನಿರ್ಧರಿಸಿದೆ.

ಜನರಿಂದ ನೇರವಾಗಿ ದೇಣಿಗೆ ಸಂಗ್ರಹಿಸುವ ಸಲುವಾಗಿ ದೇಶಾದ್ಯಂತ 40 ದಿನಗಳ ಸಂಪರ್ಕ ಆಂದೋಲನವನ್ನು ಹಮ್ಮಿಕೊಂಡಿದೆ. ಗುರುವಾರ ದೆಹಲಿಯಲ್ಲಿ ಎಐಸಿಸಿ ಪದಾಧಿಕಾರಿಗಳು, ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರು, ಖಜಾಂಚಿಗಳ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.

ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ನಾಯಕರು ದೇಶಾದ್ಯಂತ ಇರುವ ಎಲ್ಲ ಬೂತ್‌ಗಳ ವ್ಯಾಪ್ತಿಯ ಪ್ರತಿ ಮನೆಗೂ ತೆರಳಿ ದೇಣಿಗೆ ಸಂಗ್ರಹಿಸಲಿದ್ದಾರೆ. ಬಾರ್‌ ಕೋಡ್‌ ಹಾಗೂ ಸಂಖ್ಯೆ ಹೊಂದಿರುವ ಕೂಪನ್‌ಗಳನ್ನು ಹಣ ಕೊಟ್ಟವರಿಗೆ ನೀಡಲಿದ್ದಾರೆ. ಜತೆಗೆ ದಾನಿಗಳ ಹೆಸರು, ಮೊಬೈಲ್‌ ದೂರವಾಣಿ ಸಂಖ್ಯೆಯನ್ನೂ ಸಂಗ್ರಹಿಸಲಾಗುತ್ತದೆ. ಇದರಿಂದ ದೇಣಿಗೆ ಸಂಗ್ರಹ ಜತೆಗೆ ಮತದಾರರ ಬೃಹತ್‌ ಡೇಟಾಬೇಸ್‌ ಕೂಡ ಸಿದ್ಧವಾದಂತಾಗಲಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ನಾಯಕರೊಬ್ಬರು ತಿಳಿಸಿದ್ದಾರೆ.