25 ಕಡೆ ಅಧಿಕಾರ ಹಿಡಿಯಲು ಕಾಂಗ್ರೆಸ್‌ ಪ್ಲಾನ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 5, Sep 2018, 10:33 AM IST
Congress Plan To Take Authorization Of Local Bodies
Highlights

ಸಂಸ್ಥೆಗಳಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್‌, ಕೆಪಿಜೆಪಿ, ಬಿಎಸ್‌ಪಿ, ಹಾಗೂ ಪಕ್ಷೇತರರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ರಾಜ್ಯ ನಾಯಕತ್ವ ಸ್ಥಳೀಯ ಕಾಂಗ್ರೆಸ್ಸಿಗರಿಗೆ ಅಧಿಕಾರ ನೀಡಿದೆ.

ಬೆಂಗಳೂರು :  ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಅತಂತ್ರಗೊಂಡಿರುವ 30 ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್‌, ಕೆಪಿಜೆಪಿ, ಬಿಎಸ್‌ಪಿ, ಹಾಗೂ ಪಕ್ಷೇತರರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ರಾಜ್ಯ ನಾಯಕತ್ವ ಸ್ಥಳೀಯ ಕಾಂಗ್ರೆಸ್ಸಿಗರಿಗೆ ಅಧಿಕಾರ ನೀಡಿದ್ದು, ಕನಿಷ್ಠವೆಂದರೂ 22ರಿಂದ 25 ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಹಿಡಿಯುವ ದಿಸೆಯಲ್ಲಿ ತೀವ್ರ ಪ್ರಯತ್ನ ಆರಂಭವಾಗಿದೆ.

ಅತಂತ್ರಗೊಂಡಿರುವ ಸ್ಥಳೀಯ ಸಂಸ್ಥೆಗಳ ಪೈಕಿ ಐದು ಸ್ಥಳೀಯ ಸಂಸ್ಥೆಗಳಲ್ಲಿ (ಗೋಕಾಕ ಹಾಗೂ ನಿಪ್ಪಾಣಿ ಪುರಸಭೆ, ಚಿಕ್ಕೋಡಿ ಹಾಗೂ ಕೊಣ್ಣೂರ ನಗರಸಭೆ ಮತ್ತು ಖಾನಾಪುರ ಪಟ್ಟಣ ಪಂಚಾಯಿತಿ) ಸಂಪೂರ್ಣವಾಗಿ ಪಕ್ಷೇತರರದ್ದೇ ಪ್ರಾಬಲ್ಯವಿದೆ. ಹೀಗಾಗಿ ಇಲ್ಲಿ ಪಕ್ಷೇತರರ ಸಿಂಡಿಕೇಟ್‌ ಅಧಿಕಾರ ಹಿಡಿಯಲಿದೆ ಎಂದೇ ಕಾಂಗ್ರೆಸ್‌ ಭಾವಿಸಿ ಈ ಸ್ಥಳೀಯ ಸ್ಥಳೀಯ ಸಂಸ್ಥೆಗಳ ವಿಚಾರದಲ್ಲಿ ತಲೆಕೆಡಿಸಿಕೊಂಡಿಲ್ಲ. ಉಳಿದಂತೆ ಎರಡು ನಗರ ಪಾಲಿಕೆ (ತುಮಕೂರು, ಮೈಸೂರು) 7 ಪುರಸಭೆ, 11 ನಗರಸಭೆ ಮತ್ತು ಎರಡು ಪಟ್ಟಣ ಪಂಚಾಯತಿಗಳಲ್ಲಿ ಅಧಿಕಾರ ಹಿಡಿಯುವ ಪ್ರಯತ್ನವನ್ನು ಕಾಂಗ್ರೆಸ್‌ ನಡೆಸಲಿದೆ.

ಪುರಸಭೆಗಳ ಪೈಕಿ ಅತಂತ್ರಗೊಂಡಿರುವ ಚಿತ್ರದುರ್ಗ ಹಾಗೂ ಚಾಮರಾಜನಗರ ಪುರಸಭೆಗಳಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್‌ಗೆ ಯಾವ ಅವಕಾಶವೂ ಇಲ್ಲ. ಇಲ್ಲಿ ಬಿಜೆಪಿಯ ಪ್ರಾಬಲ್ಯವಿದೆ. ಉಳಿದಂತೆ ಕೊಳ್ಳೆಗಾಲ ಪುರಸಭೆಯಲ್ಲಿ ಬಿಎಸ್‌ಪಿ ಹಾಗೂ ಪಕ್ಷೇತರರ ಜತೆ ಸೇರಿ ಅಧಿಕಾರ ಹಿಡಿಯುವ ಪ್ರಯತ್ನ ಕಾಂಗ್ರೆಸ್‌ ನಡೆಸಲಿದೆ. ಉಳ್ಳಾಲ ಪುರಸಭೆಯಲ್ಲಿ ಜೆಡಿಎಸ್‌ ಹಾಗೂ ಪಕ್ಷೇತರರ ನೆರವಿನೊಂದಿಗೆ, ಹಾವೇರಿ ಪುರಸಭೆಯಲ್ಲಿ ಪಕ್ಷೇತರರೊಂದಿಗೆ ಸೇರಿ ಕಾಂಗ್ರೆಸ್‌ ಅಧಿಕಾರ ಹಿಡಿಯಬಹುದು.

ರಾಣೆಬೆನ್ನೂರಿನಲ್ಲಿ ಅರಣ್ಯ ಸಚಿವ ಶಂಕರ್‌ ಅವರ ಕೆಪಿಜೆಪಿ ಉತ್ತಮ ಸಾಧನೆ ಮಾಡಿದೆ. ಹೀಗಾಗಿ ಈ ಪುರಸಭೆಯಲ್ಲಿ ಕಾಂಗ್ರೆಸ್‌ ಕೆಪಿಜೆಪಿ ಜತೆ ಸೇರಿ ಅಧಿಕಾರ ಹಿಡಿಯಲಿದೆ. ಇನ್ನು ಕಾರವಾರ ಹಾಗೂ ಕೊಪ್ಪಳದಲ್ಲಿ ಜೆಡಿಎಸ್‌ ಹಾಗೂ ಪಕ್ಷೇತರರ ಬೆಂಬಲ ದೊರೆತರೆ ಕಾಂಗ್ರೆಸ್‌ ಅಧಿಕಾರ ಹಿಡಿಯಬಹುದು. ಆದರೆ, ರಾಯಚೂರಿನಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿಯಲು ಪಕ್ಷೇತರರ ಬೆಂಬಲ ಬೇಕು. ಆದರೆ, ಈ ಪುರಸಭೆಯಲ್ಲಿ ಪಕ್ಷೇತರರ ಬೆಂಬಲ ಬಿಜೆಪಿಗೆ ದೊರಕುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

ನಗರ ಸಭೆಗಳ ಪೈಕಿ ಚೆನ್ನಗಿರಿ, ಬಂಟ್ವಾಳ, ಹುನಗುಂದ, ದೇವದುರ್ಗ ಹಾಗೂ ಮಾನ್ವಿಗಳಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿಕೂಟ ಅಧಿಕಾರ ಹಿಡಿಯಲು ಅವಕಾಶವಿದೆ. ಮುದ್ದೇಬಿಹಾಳ ಹಾಗೂ ಲಕ್ಷ್ಮೇಶ್ವರದಲ್ಲಿ ಜೆಡಿಎಸ್‌ ಜತೆಗೆ ಪಕ್ಷೇತರರ ಬೆಂಬಲವನ್ನು ಕಾಂಗ್ರೆಸ್‌ ಒಗ್ಗೂಡಿಸಬೇಕಾಗುತ್ತದೆ. ಅಂಕೋಲದಲ್ಲಿ ಪಕ್ಷೇತರರ ಜತೆಗೆ ಅಧಿಕಾರ ರಚಿಸಬಹುದು. ಉಳಿದಂತೆ ಸಂಕೇಶ್ವರ, ತೇರದಾಳ ಮತ್ತು ಆಳಂದದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಅಧಿಕಾರ ಹಿಡಿಯಲು ಸಮಾನ ಅವಕಾಶವಿದೆ. ಇಲ್ಲಿ ಪಕ್ಷೇತರನೇ ಕಿಂಗ್‌. ಆತ ಯಾವ ಪಕ್ಷವನ್ನು ಆಯ್ಕೆ ಮಾಡಿಕೊಳ್ಳುತ್ತಾನೋ ಆ ಪಕ್ಷ ಅಧಿಕಾರ ಹಿಡಿಯಬಹುದು.

ಪಟ್ಟಣ ಪಂಚಾಯತಿಗಳ ಪೈಕಿ ಹಿರೇಕೆರೂರು ಹಾಗೂ ಕೊಟ್ಟೂರು ಪಟ್ಟಣ ಪಂಚಾಯತಿಯಲ್ಲಿ ಪಕ್ಷೇತರರ ಬೆಂಬಲ ಗಿಟ್ಟಿಸಿದರೆ ಕಾಂಗ್ರೆಸ್‌ ಅಧಿಕಾರ ಹಿಡಿಯಬಹುದು. ಇನ್ನು ಕೆರೂರು ಪಟ್ಟಣ ಪಂಚಾಯತಿಯಲ್ಲಿ ಬಿಜೆಪಿಯು ಪಕ್ಷೇತರರ ನೆರವಿನಿಂದ ಅಧಿಕಾರ ಹಿಡಿಯುವ ಸಾಧ್ಯತೆ ಹೊಂದಿದೆ.

loader