ಕಾಂಗ್ರೆಸ್‌ ಗೆದ್ದರೆ ಮಹಿಳಾ ಮೀಸಲು

First Published 9, Apr 2018, 7:43 AM IST
Congress Plan To Start Women Reservation
Highlights

ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ತರಲು ಎಲ್ಲಾ ಪ್ರಕ್ರಿಯೆ ನಡೆಸಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಈ ಸಂಬಂಧಿ ಪ್ರಕ್ರಿಯೆಯೇ ನಿಂತಿದೆ. ಭವಿಷ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಜಾರಿಗೆ ಪ್ರಯತ್ನ ನಡೆಸುವುದಾಗಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಭರವಸೆ ನೀಡಿದರು.

ಬೆಂಗಳೂರು : ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ತರಲು ಎಲ್ಲಾ ಪ್ರಕ್ರಿಯೆ ನಡೆಸಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಈ ಸಂಬಂಧಿ ಪ್ರಕ್ರಿಯೆಯೇ ನಿಂತಿದೆ. ಭವಿಷ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಜಾರಿಗೆ ಪ್ರಯತ್ನ ನಡೆಸುವುದಾಗಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಭರವಸೆ ನೀಡಿದರು.

ಅರಮನೆ ರಸ್ತೆಯ ರಾಡಿಸನ್‌ ಬ್ಲೂ (ಏಟ್ರಿಯಾ) ಹೋಟೆಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹಿಳಾ ಸಾಧಕಿಯರೊಂದಿಗೆ ಸಂವಾದದಲ್ಲಿ ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ರಾಹುಲ್‌ ಈ ಪ್ರತಿಕ್ರಿಯೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಮಾಧ್ಯಮಗಳನ್ನು ಹೊರಗಿಟ್ಟು ನಡೆಸಲಾದ ಈ ಸಂವಾದಲ್ಲಿ ಅವರು ಮಹಿಳಾ ಮೀಸಲಾತಿ ಜಾರಿಗೆ ಮುಂದಾಗದ ಬಿಜೆಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು ಎಂದು ಮೂಲಗಳು ಹೇಳಿವೆ.

ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸುವ ಇಚ್ಛೆ ಇರುವವರು ರಾಜಕೀಯಕ್ಕೆ ಪ್ರವೇಶ ಮಾಡಲು ಮುಂದಾಗಬೇಕು. ಆಗ ಮಹಿಳೆಯರ ಸಾಕಷ್ಟುಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಮಹಿಳಾ ಸಾಧಕರಿಗೆ ಇದೇ ವೇಳೆ ರಾಜಕೀಯಕ್ಕೆ ಬರುವಂತೆ ಕರೆ ನೀಡಿದರು.

ದೇಶದಲ್ಲಿ ಪಠ್ಯ ಆಧಾರಿತ ಹಾಗೂ ಅಂಕಗಳನ್ನೇ ಗುರಿಯಾಗಿಸಿಕೊಂಡು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ ಎಂದು ಶಿಕ್ಷಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ಅಂಕಗಳನ್ನು ಗಳಿಸುವುದೇ ಸಾಧನೆ ಎಂಬ ಅಭಿಪ್ರಾಯ ಪೋಷಕರಲ್ಲಿದೆ. ಮಕ್ಕಳಲ್ಲಿನ ವಿಭಿನ್ನ ಕೌಶಲ್ಯಗಳನ್ನು ಗುರುತಿಸುವಲ್ಲಿ ಶಿಕ್ಷಣ ಸಂಸ್ಥೆಗಳು ವಿಫಲವಾಗುತ್ತಿವೆ. ಜೊತೆಗೆ ಕೌಶಲ್ಯಕ್ಕೆ ಹೆಚ್ಚಿನ ಪ್ರೊತ್ಸಾಹ ನೀಡುತ್ತಿಲ್ಲ. ಈ ಮನಸ್ಥಿತಿ ಬದಲಾಗಬೇಕಾಗಿದೆ. ಅಲ್ಲದೆ, ಸರ್ಕಾರಗಳು ಕೌಶಲ್ಯಕ್ಕೆ ಆಧಾರಿತ ಶಿಕ್ಷಣ ವ್ಯವಸ್ಥೆ ಜಾರಿಗೆ ಆಧ್ಯತೆ ನೀಡಲು ಮುಂದಾಗಬೇಕು ಎಂದು ಕರೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಸಂವಾದದ ವೇಳೆ ರಾಜಕೀಯದಲ್ಲಿ ನಿಮಗೆ ಇರುವ ಒತ್ತಡಗಳನ್ನು ಹೇಗೆ ನಿಭಾಯಿಸುತ್ತೀರಿ ಎಂಬ ಚಿತ್ರನಟಿ ಶರ್ಮಿಳಾ ಮಾಂಡ್ರೆ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್‌, ಈ ಹಿಂದೆ ಸಾಕಷ್ಟುಸಮಯ ವ್ಯಾಯಾಮ ಮಾಡುತ್ತಿದ್ದೆ. ಪ್ರಸಕ್ತ ದೇಶಾದ್ಯಂತ ಸಂಚಾರ ಮಾಡುತ್ತಿದ್ದೇನೆ ಇದರಿಂದಾಗಿ ಸಮಯದ ಅಭಾವವಿದೆ. ಪರಿಣಾಮ ವ್ಯಾಯಾಮ ಮಾಡಲು ಸಮಯಾವಕಾಶ ಸಿಗುತ್ತಿಲ್ಲ. ಆದರೂ ಕೆಲ ಸಂದರ್ಭಗಳಲ್ಲಿ ರನ್ನಿಂಗ್‌ ಮಾಡುತ್ತೇನೆ ಎಂದು ತಿಳಿಸಿದರು. ಸಂವಾದದಲ್ಲಿ ರಂಗಕರ್ಮಿ ಅರುಂಧತಿ ನಾಗ್‌ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಎಲ್ಲರಿಗೂ ಅವಕಾಶ ಸಿಗಲಿಲ್ಲ:

ರಾಹುಲ್‌ ಗಾಂಧಿ ಅವರೊಂದಿಗೆ ಹಮ್ಮಿಕೊಂಡಿದ್ದ ಸಂವಾದದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಸುಮಾರು 100 ಜನ ಮಹಿಳಾ ಸಾಧಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಕೇವಲ 10 ಮಂದಿಗೆ ಮಾತ್ರ ಪ್ರಶ್ನೆ ಕೇಳುವುದಕ್ಕೆ ಅವಕಾಶ ನೀಡಲಾಗಿತ್ತು. ಇದರಿಂದಾಗಿ ಕೆಲ ಸಾಧಕರು ಇಲ್ಲಿಗೆ ಬಂದು ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದ್ವೇಷ ಮನಸ್ಥಿತಿ ಉಳ್ಳವರಿಂದ ಗೌರಿ ಹತ್ಯೆ

ಮಹಿಳಾ ಸಾಧಕರ ಸಂವಾದಲ್ಲಿ ಭಾಗವಹಿಸಿದ್ದ ಗೌರಿ ಲಂಕೇಶ್‌ ಸಹೋದರಿ ಕವಿತಾ ಲಂಕೇಶ್‌, ಸತ್ಯವನ್ನು ಪ್ರತಿಪಾದಿಸುವ ಗೌರಿ ಲಂಕೇಶ್‌ ಸೇರಿದಂತೆ ಹಲವು ಪತ್ರಕರ್ತರ ಹತ್ಯೆಯಾಗುತ್ತಿದ್ದು, ಇವರ ರಕ್ಷಣೆಗೆ ಯಾವ ಕ್ರಮ ಕೈಗೊಳ್ಳಲಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್‌ ಗಾಂಧಿ, ಪ್ರಸ್ತುತ ದೇಶದಲ್ಲಿ ದ್ವೇಷದ ಮನಸ್ಥಿತಿ ಹೆಚ್ಚಾಗುತ್ತಿದ್ದು, ವಿಭಿನ್ನ ಅಭಿಪ್ರಾಯಗಳನ್ನು ಸಹಿಸಲಾಗುತ್ತಿಲ್ಲ. ಪರಿಣಾಮದಿಂದಾಗಿ ಈ ರೀತಿಯ ಘಟನೆಗಳು ನಡೆಯಲು ಕಾರಣವಾಗುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಾಗಿದೆ ಎಂದುರು. ಇದೇ ವೇಳೆ ಕವಿತಾ ಲಂಕೇಶ್‌ ಅವರು ‘ದಿ ವೇ ಐ ಸೀ ಇಟ್‌ -ಎ ಗೌರಿ ಲಂಕೇಶ್‌ ರೀಡರ್‌’ ಎಂಬ ಪುಸ್ತಕವನ್ನು ರಾಹುಲ್‌ ಗಾಂಧಿ ಅವರಿಗೆ ನೀಡಿದರು.

loader