ಮುಂದಿನ ವರ್ಷ ನಡೆಯಲಿರುವ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಪಕ್ಷದಲ್ಲಿನ ಸಣ್ಣಪುಟ್ಟ ಗೊಂದಲಗಳಿಗೆ ಫುಲ್ ಸ್ಟಾಪ್ ಹಾಕಿ ಒಗ್ಗಟ್ಟಿನಿಂದ ಸಾಗಲು ಕಾರ್ಯತಂತ್ರ ರೂಪಿಸುತ್ತಿದೆ. ರಾತ್ರಿ ದಿಗ್ವಿಜಯ್ ಸಿಂಗ್ ಪ್ರಮುಖ ನಾಯಕರ ಸಭೆ ಕರೆದು ಮುಂದಿನ ಕಾರ್ಯತಂತ್ರದ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ.
ಬೆಂಗಳೂರು(ಎ.18): ಮುಂದಿನ ವರ್ಷ ನಡೆಯಲಿರುವ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಪಕ್ಷದಲ್ಲಿನ ಸಣ್ಣಪುಟ್ಟ ಗೊಂದಲಗಳಿಗೆ ಫುಲ್ ಸ್ಟಾಪ್ ಹಾಕಿ ಒಗ್ಗಟ್ಟಿನಿಂದ ಸಾಗಲು ಕಾರ್ಯತಂತ್ರ ರೂಪಿಸುತ್ತಿದೆ. ರಾತ್ರಿ ದಿಗ್ವಿಜಯ್ ಸಿಂಗ್ ಪ್ರಮುಖ ನಾಯಕರ ಸಭೆ ಕರೆದು ಮುಂದಿನ ಕಾರ್ಯತಂತ್ರದ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ.
ಬೈ ಎಲೆಕ್ಷನ್ ಗೆಲುವಿನ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಮುಂದಿನ ಮಹಾಚುನಾವಣೆಯತ್ತ ಗಮನ ಹರಿಸಿದೆ. ಆದರೆ ಸಂಪುಟ ವಿಸ್ತರಣೆ, ಕೆಪಿಸಿಸಿ ಅಧ್ಯಕ್ಷ ಗಾದಿ ವಿಚಾರ ತಲೆನೋವಾಗಿದೆ. ಹೀಗಾಗಿ ಪಕ್ಷದಲ್ಲಿನ ಗೊಂದಲ ನಿವಾರಿಸಿ ಒಗ್ಗಟ್ಟಿನಿಂದ ಮುಂದುವರೆಯುವಂತೆ ರಾಜ್ಯ ಮುಖಂಡರಿಗೆ ದಿಗ್ವಿಜಯ್ ಸಿಂಗ್ ಮೂಲಕ ಹೈಕಮಾಂಡ್ ರವಾನಿಸಿದೆ. ನಿನ್ನೆ ರಾತ್ರಿ ರಾಜ್ಯಕ್ಕೆ ದಿಢೀರ್ ಭೇಟಿ ನೀಡಿದ ದಿಗ್ವಿಜಯ್ ಸಿಂಗ್ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಪ್ರಮುಖರೊಂದಿಗೆ ಸಭೆ ನಡೆಸಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.
ಸಭೆಯಲ್ಲಿ ಚರ್ಚೆಯಾಗಿದ್ದೇನು?
ಬೆಂಗಳೂರಲ್ಲಿ ಎಐಸಿಸಿ ಮಹಾಧಿವೇಶನ ನಡೆಸುವಂತೆ ಈ ಹಿಂದೆಯೇ ಕೆಪಿಸಿಸಿ , ಹೈಕಮಾಂಡ್'ಗೆ ಮನವಿ ಮಾಡಿತ್ತು. ಇದೀಗ ಹೈಕಮಾಂಡ್ ಮನಸು ಮಾಡಿದೆ. ಈ ಬಾರಿ ಎಐಸಿಸಿ ಮಹಾಧಿವೇಶನವನ್ನ ಬೆಂಗಳೂರಲ್ಲಿ ನಡೆಸಲು ಹೈಕಮಾಂಡ್ ಉತ್ಸುಕವಾಗಿದ್ದು ಪಕ್ಷದ ಬಲ ಸಂವರ್ಧನೆಗೆ ಮುಂದಾಗಿದೆ. ಹಾಗೆ 2018ರ ಚನಾವಣೆಗೆ ಅಭ್ಯರ್ಥಿ ಆಯ್ಕೆಗೆ ಆಂತರಿಕ ಸಮೀಕ್ಷೆ ನಡೆಸುವುದು. ಅಹಿಂದ ಜೊತೆಗೆ ಮೇಲ್ವರ್ಗದ ಜನರ ಸೆಳೆಯಲು ಕಾರ್ಯತಂತ್ರ ರೂಪಿಸುವುದು. ಈಗಲೇ ಮುಂದಿನ ಚುನಾವಣೆಯ ಪ್ರಣಾಳಿಕೆ ಸಮಿತಿ ರಚಿಸುವುದು . ಸಮಯ ಬಂದಾಗ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿವರೆಗೂ ಪಕ್ಷ ಸಂಘಟನೆ, ಉತ್ತಮ ಆಡಳಿತದತ್ತ ಗಮನ ನೀಡಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹಾಗೇಯೆ ಸಂಪುಟ ವಿಸ್ತರಣೆ ಯನ್ನು ಸಿಎಂ ವಿವೇಚನೆಗೆ ಬಿಡುವುದು. ಹೀಗೆ ಸಭೆಯಲ್ಲಿ ಹಲವು ವಿಷಯಗಳ ಕುರಿತು ಚರ್ಚೆ ಮಾಡಲಾಗಿದೆ.
ಇನ್ನೂ ಜೆಡಿಎಸ್ ಜೊತೆ ಉತ್ತಮ ಸಂಬಂಧ ಹೊಂದುವ ಆಸೆಯನ್ನು ಸಿದ್ದರಾಮಯ್ಯ ಹೊಂದಿದ್ದಾರೆ. ಅಲ್ಲದೇ ದೇವೇಗೌಡರನ್ನ ಭೇಟಿ ಮಾಡುತ್ತೇನೆ ಎಂದು ಹೇಳುತ್ತಲೇ ಇದ್ದಾರೆ. ಆದರೆ ಸದ್ಯ ಆ ಬಗ್ಗೆ ಚಿಂತೆ ಬೇಡ. ನಿಮ್ಮ ಪಾಡಿಗೆ ನೀವು ಪಕ್ಷ ಸಂಘಟಿಸಿ, ಚುನಾವಣೆ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತಗೆದುಕೊಳ್ಳುವ ಬಗ್ಗೆ ವರಿಷ್ಠರು ಸೂಚನೆ ನೀಡಲಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ಸಭೆಯಲ್ಲಿ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಸಚಿವ ಸಂಪುಟ ವಿಸ್ತರಣೆ, ಕೆಪಿಸಿಸಿ ಅಧ್ಯಕ್ಷ ಗಾದಿಯಿಂದ ಗೊಂದಲದಲ್ಲಿರುವ ಕಾಂಗ್ರೆಸ್ ಗೆ ದಿಗ್ವಿಜಯ್ ಸಿಂಗ್ ಮುಲಾಮು ಹಚ್ಚಿ ಪಕ್ಷ ಸಂಘಟನೆ ಪಾಠ ಮಾಡುತ್ತಿದ್ದಾರೆ. ಆದ್ರೆ ಮುಂದಿನ ದಿನಗಳಲ್ಲಿ ಏನಾಗುತ್ತೋ ಕಾದು ನೋಡಬೇಕಿದೆ.
