ನವದೆಹಲಿ(ಆ.05): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಡೆ ಪ್ರತಿಪಕ್ಷ ಕಾಂಗ್ರೆಸ್‌ನಲ್ಲಿ ವಿಭಜನೆಗೆ ಕಾರಣವಾದಂತಿದೆ.

ಕೇಂದ್ರ ಸರ್ಕಾರದ ಕಾಶ್ಮೀರ ನಿರ್ಣಯ ಬೆಂಬಲಿಸಿ ಕಾಂಗ್ರೆಸ್ ರಾಜ್ಯಸಭಾ ಸದಸ್ಯರೋರ್ವರು ಕಾಂಗ್ರೆಸ್ ವಿಪ್ ಉಲ್ಲಂಘಿಸಿದ್ದಲ್ಲದೇ, ರಾಜ್ಯಸಭಾ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ.

ಅಸ್ಸಾಂನಿಂದ ಕಾಂಗ್ರೆಸ್ ರಾಜ್ಯಸಭಾ ಸಂಸದರಾಗಿರುವ ಭುಭನೇಶ್ವರ್ ಕಲಿತಾ, ಅಮಿತ್ ಶಾ ಮಂಡಿಸಿದ ಕಾಶ್ಮೀರ ಮಸೂದೆಗೆ ಬೆಂಬಲ ಸೂಚಿಸಿ ಮತದಾನ ಮಾಡಿದರು. ಪಕ್ಷದ ವಿಪ್ ಉಲ್ಲಂಘಿಸಿ ಕಲಿತಾ ಮತದಾನ ಮಾಡಿದ್ದು ವಿಶೇಷವಾಗಿತ್ತು.

ಮತದಾನ ಮಾಡಿ ಹೊರಬಂದು ಮಾತನಾಡಿದ ಭುಭನೇಶ್ವರ್ ಕಲಿತಾ, ಕಾಂಗ್ರೆಸ್ ಆತ್ಮಹತ್ಯೆ ಮಾಡಿಕೊಳ್ಳುವ ಹಾದಿಯಲ್ಲಿದ್ದು, ಕಾಶ್ಮೀರ ಕುರಿತ ಅದರ ನಿಲುವಿನಿಂದ ತೀವ್ರ ನೊಂದಿರುವುದಾಗಿ ತಿಳಿಸಿದ್ದಾರೆ.

ಇದೇ ಕಾರಣಕ್ಕೆ ಕೇಂದ್ರ ಸರ್ಕಾರದ ಕಾಶ್ಮೀರ ಮಸೂದೆಯನ್ನು ತಾವು ಬೆಂಬಲಸಿವುದಲ್ಲದೇ, ಕಾಂಗ್ರೆಸ್ ನೀಡಿದ ವಿಪ್‌ನ್ನು ಉಲ್ಲಂಘಿಸಿ ಮಸೂದೆ ಪರ ಮತದಾನ ಮಾಡಿದ್ದಾಗಿ ಕಲಿತಾ ಸ್ಪಷ್ಟಪಡಿಸಿದ್ದಾರೆ.

ಇಷ್ಟೇ ಅಲ್ಲದೇ ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೂ ರಾಜೀನಾಮೆ ನೀಡಿರುವ ಕಲಿತಾ, ಆತ್ಮಹತ್ಯೆ ಹಾದಿಯಲ್ಲಿರುವ ಕಾಂಗ್ರೆಸ್ ಸಹವಾಸ ಸಾಕು ಎಂದು ಟ್ವೀಟ್ ಮಾಡಿದ್ದಾರೆ.