ಬೆಂಗಳೂರು[ಜು.06]: ಕಳೆದೊಂದು ವಾರದಿಂದ ರಾಜ್ಯ ಸರ್ಕಾರಕ್ಕೆ ಒಂದಾದ ಬಳಿಕ ಮತ್ತೊಂದರಂತೆ ಏಟು ಬೀಳುತ್ತಿದೆ. ಆನಂದ್ ಸಿಂಗ್ ರಾಜೀನಾಮೆ ಬೆನ್ನಲ್ಲೇ, ಇಂದು ಶನಿವಾರ 16 ಮಂದಿ ಶಾಸಕರು ತಮ್ಮ ಸ್ಥಾನಕ್ಕೆ ಗುಡ್ ಬೈ ಹೇಳಲು ಸಜ್ಜಾಗಿದ್ದಾರೆ. ಇವರಲ್ಲಿ 8 ಮಂದಿ ಈಗಾಗಲೇ ರಾಜೀನಾಮೆ ಸಲ್ಲಿಸಿದ್ದು, ರಾಮಲಿಂಗಾ ರೆಡ್ಡಿ ಸೇರಿದಂತೆ ಒಟ್ಟು ಆರು ಮಂದಿ ಇರುವ ಎರಡನೇ ಟೀಂ ರಾಜೀನಾಮೆ ನೀಡಲು ವಿಧಾನಸೌಧಕ್ಕೆ ಬಂದಿದೆ. ಈ ಬೆಳವಣಿಗೆಗಳ ನಡುವೆ ಬಿಜೆಪಿ ನಾಯಕ ಆರ್. ಅಶೋಕ್ ವಿಶೇಷವಾಗಿ ಗಮನ ಸೆಳೆದಿದ್ದಾರೆ.

ಹೌದು ರಾಮಲಿಂಗಾ ರೆಡ್ಡಿ ಸೇರಿದಂತೆ ಇನ್ನಿತರ ಶಾಸಕರ ಎರಡನೇ ತಂಡ ರಾಜೀನಾಮೆ ಸಲ್ಲಿಸಲು ವಿಧಾನಸೌಧಕ್ಕೆ ಆಗಮಿಸಿದ್ದಾರೆ. ತಾವು ರಾಜೀನಾಮೆ ನೀಡಲು ಬಂದಿರುವುದಾಗಿ ಖುದ್ದು ರಾಮಲಿಂಗಾ ರೆಡ್ಡಿ ಹೇಳಿಕೊಂಡಿದ್ದಾರೆ. ಆದರೆ ಬಿಜೆಪಿ ಸೇರುವ ಕುರಿತಾಗಿ ಏನೂ ಹೆಳಿಕೆ ನೀಡಿಲ್ಲ.

ಇದು ದೋಸ್ತಿ ಸರ್ಕಾರದ ಕತೆಯಾದರೆ, ಅತ್ತ ಬಿಜೆಪಿಯ ಕತೆ ಮತ್ತೊಂದೇ ಆಗಿದೆ. ರಾಜೀನಾಮೆ ಸಲ್ಲಿಸುತ್ತಿರುವ ಬೆನ್ನಲ್ಲೇ ಬಿಜೆಪಿ ನಾಯಕರೂ ಫುಲ್ ಆ್ಯಕ್ಟಿವ್ ಆಗಿದ್ದಾರೆ. ಅದರಲ್ಲೂ ವಿಶೇಷವಾಗಿ ಆರ್. ಅಶೋಕ್ ಎಲ್ಲರ ಗಮನ ಸೆಳೆದಿದ್ದಾರೆ. ಯಾವತ್ತೂ ಆಂಡ್ರಾಯ್ಡ್ ಫೋನ್ ಬಳಸುವ ಅವರು ಇಂದು ಪುಟ್ಟ ಮೊಬೈಲ್ ನಲ್ಲಿ ಮಾತನಾಡುತ್ತಿರುವ ದೃಶ್ಯಗಳು ಕಂಡು ಬಂದಿವೆ. ಅಲ್ಲದೇ, ಸ್ವಂತ ಕಾರಿನಲ್ಲಿ ಬರದೇ ಕ್ಯಾಬ್ ನಲ್ಲಿ ಬಂದಿರುವ ಆರ್. ಅಶೋಕ್ ರಾಜ ಭವನದಲ್ಲಿರುವ ರೆಬೆಲ್ ಶಾಸಕರೊಂದಿಗೆ ಮಾತುಕತೆ ನಡೆಸಿ, ರೆಬೆಲೆ ಶಾಸಕರ ರಾಜೀನಾಮೆ ಉಸ್ತುವಾರಿ ಹೊತ್ತುಕೊಂಡಿರುವಂತೆ ಕಂಡು ಬಂದಿದ್ದಾರೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ರಾಜೀನಾಮೆ ಪರ್ವ ರಾಜ್ಯ ರಾಜಕೀಯದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ ಎಂದರೆ ತಪ್ಪಾಗುವುದಿಲ್ಲ.