ಬೆಂಗಳೂರು [ಜು.08]:  ಬೆಂಗಳೂರು ಅಭಿವೃದ್ಧಿ ಬಗ್ಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರಿಗೆ ಯಾವ ಅಧಿಕಾರವೂ ಇಲ್ಲ. ನಮ್ಮ ಕ್ಷೇತ್ರದ  ಯಾವ ಕೆಲಸಗಳೂ ಆಗುತ್ತಿಲ್ಲ. ಹೀಗಾಗಿ, ಕ್ಷೇತ್ರದ ಅಭಿವೃದ್ಧಿ ಮಾಡಲು ಕಾಂಗ್ರೆಸ್ ಆದರೆ ಏನು? ಬಿಜೆಪಿ ಆದರೆ ಏನು? ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡು ವವರ ಜತೆ ಹೋಗುತ್ತೇನೆ ಎಂದು ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ಹಾಗೂ ಜೀರೋ ಟ್ರಾಫಿಕ್ ವ್ಯವಸ್ಥೆ ಬಿಟ್ಟು ಬೇರೆ ಯಾವ ಅಧಿಕಾರವೂ ಇಲ್ಲ. 24,000 ಕೋಟಿ ರು. ಎಲಿವೇಟೆಡ್ ಕಾರಿಡಾರ್ ಯೋಜನೆ ಅಧಿಕಾರ ಚಲಾಯಿಸಿದ್ದು, ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ. ಕೊನೇ ಪಕ್ಷ ಅವರು ಬೆಂಗಳೂರಿನ ಶಾಸಕರನ್ನು ಕರೆದು ಯೋಜನೆ ಬಗ್ಗೆ ಮಾತನಾಡಬಹುದಿತ್ತು. 

ಯೋಜನೆ ಉಪಮುಖ್ಯಮಂತ್ರಿಗಳ ಬಳಿ ಇದ್ದಿದ್ದರೆ ನಾವೇ ಹೋಗಿ ಮಾತನಾಡುತ್ತಿದ್ದೆವು. ಆದರೆ, ಪರಮೇಶ್ವರ್ ಬಳಿ ಯಾವ ಅಧಿಕಾರವೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಾಸಕರು ಹಣಕ್ಕಾಗಿ ಹೋಗಿದ್ದಾರೆ ಎಂಬ ಮಾತು ಕೇಳಿಬ ರುತ್ತಿದೆ. ಆದರೆ, ಅವರ‌್ಯಾರೂ ಹಣಕ್ಕಾಗಿ ಹೋಗಿಲ್ಲ. ಅಂತಹ ಪರಿಸ್ಥಿತಿ ಯಾರಿಗೂ ಇಲ್ಲ. ನಮ್ಮ ಕ್ಷೇತ್ರಕ್ಕೆ ಯಾರು ಒಳ್ಳೆಯದು ಮಾಡುತ್ತಾರೋ ಅವರ ಜತೆ ಹೋಗಲು ನಾವು ಸಿದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದರು.