"ಕತ್ತೆಯನ್ನು ಕುದುರೆ ಎಂದು ನಾನು ಕರೆಯುವುದಿಲ್ಲ. ನನ್ನ ಪ್ರಕಾರ ಕತ್ತೆ ಎಂದರೆ ಕತ್ತೆ, ಕುದುರೆ ಎಂದರೆ ಕುದುರೆಯೇ"

ರಾಯಪುರ(ಅ. 19): ರಾಹುಲ್ ಗಾಂಧಿಯವರನ್ನು ಬಹಿರಂಗವಾಗಿಯೇ "ಕತ್ತೆ" ಎಂದು ಕರೆದ ಕಾಂಗ್ರೆಸ್ ಶಾಸಕ ಆರ್.ಕೆ.ರಾಯ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ನಿನ್ನೆ ನಡೆದ ಪಕ್ಷದ ಉನ್ನತಾಧಿಕಾರ ಸಮಿತಿಯ ಸಭೆಯಲ್ಲಿ ರಾಯ್ ಅವರನ್ನು ಅಮಾನತುಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು.

ಪಕ್ಷದಿಂದ ಅಮಾನತುಗೊಳಿಸಿದರೂ ತಮ್ಮ ಹೇಳಿಕೆಯನ್ನು ರಾಯ್ ಸಮರ್ಥಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಬಗ್ಗೆ ಸತ್ಯ ಹೇಳಿದ್ದಕ್ಕೆ ತನಗೆ ಇಂತಹ ಶಿಕ್ಷೆ ಸಿಕ್ಕಿದೆ ಎಂದು ಆರ್.ಕೆ.ರಾಯ್ ಪ್ರತಿಕ್ರಿಯಿಸಿದ್ದಾರೆ.

"ರಾಹುಲ್ ಗಾಂಧಿ ಹಾಗೂ ಅವರ ದೃಷ್ಟಿಕೋನ ಮತ್ತವರ ನಾಯಕತ್ವದ ವಿರುದ್ಧ ನಾನು ಮಾತನಾಡಿದ್ದೇನೆ. ನಾನು ಮುಕ್ತವಾಗಿ ಮಾತನಾಡುವ ಮನುಷ್ಯ. ಕತ್ತೆಯನ್ನು ಕುದುರೆ ಎಂದು ನಾನು ಕರೆಯುವುದಿಲ್ಲ. ನನ್ನ ಪ್ರಕಾರ ಕತ್ತೆ ಎಂದರೆ ಕತ್ತೆ, ಕುದುರೆ ಎಂದರೆ ಕುದುರೆಯೇ" ಎಂದು ಆರ್.ಕೆ.ರಾಯ್ ಇನ್ನಷ್ಟು ಟೀಕೆ ಮಾಡಿದ್ದಾರೆ.

ರಾಯ್ ಅವರು ಹಲವು ತಿಂಗಳಿನಿಂದ ಪಕ್ಷ ವಿರೋಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆನ್ನಲಾಗಿದೆ. ಮಾಜಿ ಕಾಂಗ್ರೆಸ್ಸಿಗ ಹಾಗೂ ಛತ್ತೀಸ್'ಗಡ ಜನತಾ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಅಜಿತ್ ಜೋಗಿ ಅವರನ್ನು ರಾಯ್ ಬಹಿರಂಗವಾಗಿಯೇ ಬೆಂಬಲ ಸೂಚಿಸುತ್ತಾ ಬಂದಿರುವುದನ್ನು ಕಾಂಗ್ರೆಸ್ ಹೈಕಮಾಂಡ್ ಗಮನಿಸತ್ತಾ ಬಂದಿತ್ತು. ಇದೀಗ ರಾಹುಲ್ ಗಾಂಧಿ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿರುವ ರಾಯ್ ಅವರನ್ನು ಶಿಸ್ತಿನ ಕ್ರಮವಾಗಿ ಅಮಾನತುಗೊಳಿಸಿರುವುದು ನಿರೀಕ್ಷಿತವಾಗಿಯೇ ಇದೆ.