ಗುಜರಾತ್'ಗೆ ಮರಳಿದ 44 ಕಾಂಗ್ರೆಸ್ ಶಾಸಕರು: ಶಾಸಕರೊಂದಿಗೆ ಹೊರಟ ಸಚಿವ ಡಿ ಕೆ ಶಿವಕುಮಾರ್
ಕುದುರೆ ವ್ಯಾಪಾರಕ್ಕೆ ಹೆದರಿ ಬೆಂಗಳೂರಿನ ಖಾಸಗಿ ರೆಸಾರ್ಟ್'ನಲ್ಲಿ ವಾಸ್ತವ್ಯ ಹೂಡಿದ್ದ ಕಾಂಗ್ರೆಸ್ ಶಾಸಕರು ನಿನ್ನೆ ತಡರಾತ್ರಿ ಗುಜರಾತ್'ಗೆ ವಾಪಸ್ಸಾಗಿದ್ದಾರೆ. ವಾಸ್ತವ್ಯದ ಪೂರ್ಣ ಉಸ್ತುವಾರಿ ಹೊಂದಿದ್ದ ಡಿಕೆಶಿ ಸಹೋದರರು ಏರ್ ಪೋರ್ಟ್ ತನಕ ತೆರಳಿ ಗುಜರಾತ್ ಶಾಸಕರನ್ನ ಬೀಳ್ಕೊಟ್ಟಿದ್ದಾರೆ. ರಾಜ್ಯಸಭಾ ಚುನಾವಣೆಗಾಗಿ ಬಿಜೆಪಿಯಿಂದ ಶಾಸಕರ ಕುದುರೆ ವ್ಯಾಪಾರವಾಗುವ ಭೀತಿಯಿಂದ ಗುಜರಾತ್ ನಿಂದ ಬೆಂಗಳೂರಿಗೆ ಆಗಮಿಸಿದ್ದ ಕಾಂಗ್ರೆಸ್ ಶಾಸಕರು ಗುಜರಾತ್ ಗೆ ನಿರ್ಗಮಿಸಿದ್ದಾರೆ.
ಅಹಮದಾಬಾದ್(ಆ.07): ಕುದುರೆ ವ್ಯಾಪಾರಕ್ಕೆ ಹೆದರಿ ಬೆಂಗಳೂರಿನ ಖಾಸಗಿ ರೆಸಾರ್ಟ್'ನಲ್ಲಿ ವಾಸ್ತವ್ಯ ಹೂಡಿದ್ದ ಕಾಂಗ್ರೆಸ್ ಶಾಸಕರು ನಿನ್ನೆ ತಡರಾತ್ರಿ ಗುಜರಾತ್'ಗೆ ವಾಪಸ್ಸಾಗಿದ್ದಾರೆ. ವಾಸ್ತವ್ಯದ ಪೂರ್ಣ ಉಸ್ತುವಾರಿ ಹೊಂದಿದ್ದ ಡಿಕೆಶಿ ಸಹೋದರರು ಏರ್ ಪೋರ್ಟ್ ತನಕ ತೆರಳಿ ಗುಜರಾತ್ ಶಾಸಕರನ್ನ ಬೀಳ್ಕೊಟ್ಟಿದ್ದಾರೆ. ರಾಜ್ಯಸಭಾ ಚುನಾವಣೆಗಾಗಿ ಬಿಜೆಪಿಯಿಂದ ಶಾಸಕರ ಕುದುರೆ ವ್ಯಾಪಾರವಾಗುವ ಭೀತಿಯಿಂದ ಗುಜರಾತ್ ನಿಂದ ಬೆಂಗಳೂರಿಗೆ ಆಗಮಿಸಿದ್ದ ಕಾಂಗ್ರೆಸ್ ಶಾಸಕರು ಗುಜರಾತ್ ಗೆ ನಿರ್ಗಮಿಸಿದ್ದಾರೆ.
ರಾಜ್ಯದಲ್ಲಿ 9 ದಿನಗಳ ಕಾಲ ರೆಸಾರ್ಟ್ ನಲ್ಲಿ ನೆಲೆಸಿದ್ದ ಶಾಸಕರ ವಾಸ್ತವ್ಯದ ಉಸ್ತುವಾರಿಯನ್ನ ವಹಿಸಿಕೊಂಡಿದ್ದು, ರಾಜ್ಯದ ಇಂಧನ ಸಚಿವ ಡಿ.ಕೆ.ಶಿವಕುಮಾರ್. ಇದರ ಬೆನ್ನಲ್ಲೇ, ಐಟಿ ದಾಳಿ ಸಚಿವ ಡಿ.ಕೆ,ಶಿವಕುಮಾರ್'ಗೆ ದೊಡ್ಡ ಶಾಕ್ ನೀಡಿತ್ತು. ಮೂರು ದಿನಗಳ ಕಾಲ ಸಚಿವರು ಮನೆಯಲ್ಲಿಯೇ ಇರಬೇಕಾಯಿತು. ಆದರೆ, ದಾಳಿಯ ಬಳಿಕ ಮತ್ತೆ ರೆಸಾರ್ಟ್ ನಲ್ಲಿ ಶಾಸಕರನ್ನ ನೋಡಿಕೊಳ್ಳುವ ಉಸ್ತುವಾರಿಯನ್ನ ವಹಿಸಿಕೊಂಡಿದ್ದರು. ಇದೀಗ, ನಾಳೆ ರಾಜ್ಯಸಭೆ ಚುನಾವಣೆ ಇರುವ ಹಿನ್ನೆಲೆಯಲ್ಲಿ ಎಲ್ಲಾ ಗುಜರಾತ್ ಶಾಸಕರು ಅಹಮದಾಬಾದ್ ಗೆ ತೆರಳಿದ್ದರು. ಇನ್ನು, ಸಚಿವ ಡಿಕೆಶಿ ಹಾಗೂ ಸಂಸದ ಸುರೇಶ್ ಗುಜರಾತ್ ಶಾಸಕರನ್ನ ಏರ್ ಪೋರ್ಟ್ ವರೆಗೆ ತೆರಳಿ ಬೀಳ್ಕೊಟ್ಟರು.
ಎರಡು ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಈಗಲ್ ಟನ್ ರೆಸಾರ್ಟ್ ನಿಂದ ಬಿಟ್ಟ ಗುಜರಾತ್ ಶಾಸಕರು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ್ರು. ಗುಜರಾತ್ ಶಾಸಕರ ಬಸ್ಸಿನಲ್ಲೇ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಸುರೇಶ್ ಕೂಡ ಆಗಮಿಸಿದ್ರು.ತಡರಾತ್ರಿ 2-40ರ ಸುಮಾರಿಗೆ ಗುಜರಾತ್ ನ ಅಹಮದಾಬಾದ್ ಗೆ ಪ್ರಯಾಣ ಬೆಳೆಸಿದ ಶಾಸಕರು, ಅಲ್ಲಿನ ಖಾಸಗಿ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ನಾಳೆ ಗಾಂಧಿನಗರಕ್ಕೆ ತೆರಳಿ ಮತ ಚಲಾವಣೆ ಮಾಡಲಿದ್ದಾರೆ.
ಒಟ್ಟಿನಲ್ಲಿ, ತಮ್ಮ ಮೇಲಿನ ಐಟಿ ದಾಳಿಯ ಬಳಿಕವೂ ಎದೆಗುಂದದೇ ಹೈಕಮಾಂಡ್ ತಮಗೆ ವಹಿಸಿದ್ದ ಕೆಲಸವನ್ನ ಮಾಡಿ ಮುಗಿಸಿದ್ದಾರೆ, ಇನ್ನು, ರಾಜ್ಯ ಕ್ಯಾಬಿನೆಟ್ ಮೀಟಿಂಗ್ ಇರುವ ಹಿನ್ನಲೆ ಡಿ.ಕೆ,ಶಿವಕುಮಾರ್ ಗುಜರಾತ್ ಶಾಸಕರ ಜೊತೆ ಪ್ರಯಾಣ ಬೆಳೆಸಲಿಲ್ಲ.