ನವದೆಹಲಿ[ಆ19]: ಹಲವು ನಾಯಕರ ರಾಜೀನಾಮೆಯಿಂದ ನಲುಗಿರುವ ಕಾಂಗ್ರೆಸ್ಸಿಗೆ ಮತ್ತೊಂದು ಭಾರಿ ಹಿನ್ನಡೆಯಾಗುವ ಲಕ್ಷಣಗಳು ಕಂಡುಬಂದಿವೆ.

ಅಕ್ಟೋಬರ್‌ನಲ್ಲಿ ನಡೆಯಬೇಕಿರುವ ಹರ್ಯಾಣ ವಿಧಾನಸಭೆ ಚುನಾವಣೆಗೂ ಮುನ್ನ ಆ ರಾಜ್ಯದ ಪ್ರಭಾವಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ಅವರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾಗುವ ಸ್ಪಷ್ಟಸುಳಿವು ಲಭ್ಯವಾಗತೊಡಗಿದೆ. ಇದಕ್ಕೆ ಇಂಬು ನೀಡುವಂತೆ, ಭಾನುವಾರ ನಡೆದ ಸಮಾವೇಶವೊಂದರಲ್ಲಿ ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿರುವ ಹೂಡಾ, ಬಿಜೆಪಿಯನ್ನು ಹೊಗಳಿದ್ದಾರೆ.

ರೋಹ್ಟಕ್‌ನಲ್ಲಿ ನಡೆದ ಮಹಾಪರಿವರ್ತನ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಈ ಹಿಂದೆ ಇದ್ದಂತೆ ಈಗ ಇಲ್ಲ. ಅದು ದಾರಿ ತಪ್ಪಿದೆ. ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಮೋದಿ ಸರ್ಕಾರದ ನಿರ್ಧಾರವನ್ನು ನಾನು ಬೆಂಬಲಿಸುತ್ತೇನೆ. ನನ್ನ ಹಲವು ಸಹೋದ್ಯೋಗಿಗಳು ಆ ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ. ಆದರೆ ನಮ್ಮ ಸೋದರರು ಸೈನಿಕರಾಗಿ ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಅದನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು.

ಅಲ್ಲದೆ, ದೇಶಭಕ್ತಿ ಹಾಗೂ ಆತ್ಮ ಗೌರವ ವಿಚಾರ ಬಂದರೆ ನಾನು ಯಾರ ಜತೆಗೂ ರಾಜೀಯಾಗುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದರು. ಹೂಡಾ ಅವರ ವಿರುದ್ಧ ಹಲವು ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿದ್ದು, ಅವರ ವಿರುದ್ಧ ತನಿಖೆ ನಡೆಯುತ್ತಿದೆ.