ಜಗತ್ತಿನಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರುವ ಕೇಂಬ್ರಿಜ್‌ ಅನಾಲಿಟಿಕಾ ಜೊತೆಗೆ ಭಾರತದ ಕಾಂಗ್ರೆಸ್‌ ಪಕ್ಷಕ್ಕೆ ನಂಟಿರುವ ಬಗ್ಗೆ ಕೊನೆಗೂ ಬಹಿರಂಗವಾಗಿದೆ. ಕೇಂಬ್ರಿಜ್‌ ಅನಾಲಿಟಿಕಾದ ಮಾಜಿ ನೌಕರ, ಪ್ರಸ್ತುತ ಪ್ರಕರಣ ಬಯಲಿಗೆಳೆದಿರುವ ಕ್ರಿಸ್ಟೋಫರ್‌ ವೈಲಿ, ಬ್ರಿಟನ್‌ ಸಂಸದೀಯ ಸಮಿತಿಯ ಮುಂದೆ ಸಾಕ್ಷ್ಯ ನುಡಿದ ವೇಳೆ ಈ ವಿಷಯ ತಿಳಿಸಿದ್ದಾರೆ.
ಲಂಡನ್/ನವದೆಹಲಿ: ಜಗತ್ತಿನಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರುವ ಕೇಂಬ್ರಿಜ್ ಅನಾಲಿಟಿಕಾ ಜೊತೆಗೆ ಭಾರತದ ಕಾಂಗ್ರೆಸ್ ಪಕ್ಷಕ್ಕೆ ನಂಟಿರುವ ಬಗ್ಗೆ ಕೊನೆಗೂ ಬಹಿರಂಗವಾಗಿದೆ. ಕೇಂಬ್ರಿಜ್ ಅನಾಲಿಟಿಕಾದ ಮಾಜಿ ನೌಕರ, ಪ್ರಸ್ತುತ ಪ್ರಕರಣ ಬಯಲಿಗೆಳೆದಿರುವ ಕ್ರಿಸ್ಟೋಫರ್ ವೈಲಿ, ಬ್ರಿಟನ್ ಸಂಸದೀಯ ಸಮಿತಿಯ ಮುಂದೆ ಸಾಕ್ಷ್ಯ ನುಡಿದ ವೇಳೆ ಈ ವಿಷಯ ತಿಳಿಸಿದ್ದಾರೆ.
ಇಂಗ್ಲೆಂಡ್ ಮೂಲದ ಕೇಂಬ್ರಿಜ್ ಅನಾಲಿಟಿಕಾ ಕಂಪೆನಿ ಫೇಸ್ಬುಕ್ ದತ್ತಾಂಶ ಕಳವುಗೈದ ಮತ್ತು ಭಾರತದಲ್ಲಿ ಚುನಾವಣೆಯ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದ ಆರೋಪಗಳು ಕೇಳಿಬಂದಿರುವ ನಡುವೆ, ಯುಕೆ ಸಂಸತ್ತಿನ ಡಿಜಿಟಲ್, ಸಂಸ್ಕೃತಿ, ಮಾಧ್ಯಮ ಮತ್ತು ಕ್ರೀಡಾ ಸಮಿತಿಯ ಮುಂದೆ ವೈಲಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ.
ಕಾಂಗ್ರೆಸ್ ಕಕ್ಷಿದಾರ:
‘ಸಂಖ್ಯೆಯ ಲೆಕ್ಕಾಚಾರದಲ್ಲಿ ಪರಿಗಣಿಸುವುದಾದದರೆ, ಅತಿಹೆಚ್ಚು ಬಳಕೆದಾರರಿರುವ ಭಾರತ ಫೇಸ್ಬುಕ್ನ ಅತಿದೊಡ್ಡ ಮಾರುಕಟ್ಟೆ. ಸಹಜವಾಗಿ, ರಾಜಕೀಯ ಅಪವಾದ ಮತ್ತು ಅಸ್ಥಿರಗೊಳಿಸುವಿಕೆಯ ಹಠಾತ್ ಅವಕಾಶಗಳಿರುವ ದೇಶ ಅದು. ಅವರು (ಕೇಂಬ್ರಿಜ್ ಅನಾಲಿಟಿಕಾ) ಭಾರತದಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ. ಅವರು ಭಾರತದಲ್ಲಿ ಕಚೇರಿಯನ್ನೂ ಹೊಂದಿದ್ದಾರೆ. ನನ್ನ ಪ್ರಕಾರ ಅವರ ಕಕ್ಷಿದಾರ ಕಾಂಗ್ರೆಸ್, ಎಲ್ಲ ಯೋಜನೆಗಳನ್ನು ಅವರು ರೂಪಿಸಿದ್ದರು ಎಂಬುದು ನನಗೆ ಗೊತ್ತಿದೆ. ರಾಷ್ಟ್ರೀಯ ಯೋಜನೆಯ ಬಗ್ಗೆ ನನಗೆ ನೆನಪಿಲ್ಲ, ಆದರೆ ಪ್ರಾದೇಶಿಕವಾಗಿ ನನಗೆ ಗೊತ್ತಿದೆ. ಭಾರತದ ಒಂದು ರಾಜ್ಯ, ಬ್ರಿಟನ್ನಷ್ಟುದೊಡ್ಡದಾದ ಒಂದು ರಾಜ್ಯ. ಅಲ್ಲಿ ಅವರ ಕಚೇರಿಯಿದೆ, ಅಲ್ಲಿ ಅವರ ಸಿಬ್ಬಂದಿಯೂ ಇದ್ದಾರೆ’ ಎಂದು ವೈಲಿ ತಿಳಿಸಿದ್ದಾರೆ. ಭಾರತಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಮಿತಿಗೆ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.
ಮುರೆಸನ್ ಸಂದೇಹಾಸ್ಪದ ಸಾವು:
ಎಸ್ಸಿಎಲ್ ಗ್ರೂಪ್ನ ಚುನಾವಣಾ ಮುಖ್ಯಸ್ಥ, ತಮ್ಮ ಪೂರ್ವಾಧಿಕಾರಿ ಡಾನ್ ಮುರೆಸನ್ ಕೀನ್ಯಾದಲ್ಲಿ ಸಂದೇಹಾಸ್ಪದ ಮರಣ ಹೊಂದುವುದಕ್ಕೂ ಮೊದಲು ಭಾರತದಲ್ಲಿ ಕೆಲಸ ಮಾಡಿದ್ದರು. ಕೀನ್ಯಾದ ಹೋಟೆಲೊಂದರಲ್ಲಿ ಮುರೆಸನ್ ವಿಷದಿಂದ ಸಾವಿಗೀಡಾಗಿರುವ ಸಾಧ್ಯತೆಯಿದ್ದ ಬಗ್ಗೆ ತಾವು ಕೇಳಿಸಿಕೊಂಡಿರುವುದಾಗಿ ವೈಲಿ ತಿಳಿಸಿದ್ದಾರೆ.
ರಾಹುಲ್ ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ:
ವೈಲಿ ಹೇಳಿಕೆಯ ಬಳಿಕ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೇಶದ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ. ‘ಕಾಂಗ್ರೆಸ್ ತಮ್ಮ ಕಕ್ಷಿದಾರ ಎಂದು ವೈಲಿ ಸಾರ್ವಜಕವಾಗಿ ದೃಢಪಡಿಸಿದ್ದಾರೆ. ರಾಹುಲ್ ಗಾಂಧಿ ಗಮನ ಬೇರೆಡೆ ಸೆಳೆಯಲು ಯತ್ನಿಸಿದ್ದರು. ಈಗ ಕಾಂಗ್ರೆಸ್ ಮತ್ತು ರಾಹುಲ್ ದೇಶದ ಕ್ಷಮೆ ಯಾಚಿಸಬೇಕು’ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
