Asianet Suvarna News Asianet Suvarna News

ಅತೃಪ್ತರ ಸಮಾಧಾನಿಸಲು ಕಾಂಗ್ರೆಸ್ ನಾಯಕರಿಂದ ಭರ್ಜರಿ ಪ್ಲಾನ್

ಸಂಚಲನ ಮೂಡಿಸಿರುವ ಜಾರಕಿಹೊಳಿ ಸಹೋದರರ ಪ್ರಹಸನ ಬಗೆಹರಿಸಲು ಹಾಗೂ ಬಿಜೆಪಿ ತನ್ನತ್ತ ಸೆಳೆಯಲು ಯತ್ನಿಸುತ್ತಿರುವ ಪಕ್ಷದ ಶಾಸಕರನ್ನು ಭದ್ರಪಡಿಸಿಕೊಳ್ಳಲು ಕಾಂಗ್ರೆಸ್‌ನ ಹಿರಿಯ ನಾಯಕರು ಗೌರಿಹಬ್ಬದ ದಿನ ಭರ್ಜರಿ ಸಂಧಾನ-ಸಮಾಧಾನ ಪ್ರಕ್ರಿಯೆ ನಡೆಸಿದರು.

Congress Leaders Talk With Jarkiholi Brothers
Author
Bengaluru, First Published Sep 13, 2018, 7:26 AM IST

ಬೆಂಗಳೂರು :  ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಜಾರಕಿಹೊಳಿ ಸಹೋದರರ ಪ್ರಹಸನ ಬಗೆಹರಿಸಲು ಹಾಗೂ ಬಿಜೆಪಿ ತನ್ನತ್ತ ಸೆಳೆಯಲು ಯತ್ನಿಸುತ್ತಿರುವ ಪಕ್ಷದ ಶಾಸಕರನ್ನು ಭದ್ರಪಡಿಸಿಕೊಳ್ಳಲು ಕಾಂಗ್ರೆಸ್‌ನ ಹಿರಿಯ ನಾಯಕರು ಗೌರಿಹಬ್ಬದ ದಿನ ಭರ್ಜರಿ ಸಂಧಾನ-ಸಮಾಧಾನ ಪ್ರಕ್ರಿಯೆ ನಡೆಸಿದರು.

ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಬಳಿಕ ಭುಗಿಲೆದ್ದಿರುವ ಸತೀಶ್‌ ಜಾರಕಿಹೊಳಿ ಹಾಗೂ ರಮೇಶ್‌ ಜಾರಕಿಹೊಳಿ ಅವರ ಅಸಮಾಧಾನ ಶಮನಗೊಳಿಸಲು ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಕಣಕ್ಕಿಳಿದಿದ್ದು, ಬುಧವಾರ ನಗರದ ತಮ್ಮ ನಿವಾಸದಲ್ಲಿ ಸಭೆ ನಡೆಸಿ ಸಮಾಧಾನಪಡಿಸಲು ಯತ್ನಿಸಿದರು.

ಬಿಜೆಪಿ ನಾಯಕರು ಕಾಂಗ್ರೆಸ್‌ ಶಾಸಕರನ್ನು ಸೆಳೆಯಲು ತೆರೆಮರೆಯ ಪ್ರಯತ್ನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಶಾಸಕರನ್ನು ಭದ್ರಪಡಿಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಶಾಸಕರಿಗೆ ರಾಜಧಾನಿಗೆ ಬರುವಂತೆ ಬುಲಾವ್‌ ನೀಡಿ ಒಗ್ಗಟ್ಟು ಪ್ರದರ್ಶಿಸಿದರು.

ಅಲ್ಲದೆ, ಬಿಜೆಪಿಯಿಂದ ಆಮಿಷವೊಡ್ಡಿದ್ದಾರೆ ಎನ್ನಲಾದ ಮಸ್ಕಿ ಶಾಸಕ ಪ್ರತಾಪ್‌ಗೌಡ ಪಾಟೀಲ್‌, ಸಿ.ಎಸ್‌.ಶಿವಳ್ಳಿ, ವಿಜಯನಗರ ಶಾಸಕ ಆನಂದ್‌ ಸಿಂಗ್‌, ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ, ಎಚ್‌.ಡಿ.ಕೋಟೆ ಶಾಸಕ ಅನಿಲ್‌ ಚಿಕ್ಕಮಾದು, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯಕ್‌ ಅವರನ್ನು ಸಮಾಧಾನಪಡಿಸಲು ದಿನೇಶ್‌ ಗುಂಡೂರಾವ್‌ ತೀವ್ರ ಕಸರತ್ತು ನಡೆಸಿದರು.

ಡಿಕೆಶಿ ಹಸ್ತಕ್ಷೇಪಕ್ಕೆ ಆಕ್ಷೇಪ:  ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ರಮೇಶ್‌ ಹಾಗೂ ಸತೀಶ್‌ ಜಾರಕಿಹೊಳಿ ಸಹೋದರರು, ಡಿ.ಕೆ.ಶಿವಕುಮಾರ್‌ ಪದೇ ಪದೇ ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ರಾಜಕೀಯ ನೇಮಕಾತಿ ಹಾಗೂ ವರ್ಗಾವಣೆ ವಿಚಾರದಲ್ಲಿ ಖುದ್ದು ಶಿವಕುಮಾರ್‌ ಕರೆ ಮಾಡಿ ಪ್ರಭಾವ ಬೀರಿದ್ದಾರೆ. ಈ ಮೊದಲೇ ಬೆಳಗಾವಿ ರಾಜಕಾರಣದಲ್ಲಿ ಯಾರೂ ಮಧ್ಯಪ್ರವೇಶ ಮಾಡಬಾರದು ಎಂದು ಸೂಚಿಸಿದ್ದೆವು. ಆದರೂ ನಮ್ಮ ಸೂಚನೆಗೆ ಕಿಮ್ಮತ್ತು ನೀಡದೆ ನಡೆದುಕೊಂಡರೆ ನಾವು ನಮ್ಮ ದಾರಿ ನೋಡಿಕೊಳ್ಳದೆ ವಿಧಿ ಇಲ್ಲ. ಬೆಳಗಾವಿಯಲ್ಲಿ ಅಧಿಕಾರ ಚಲಾಯಿಸುವವರನ್ನೇ ಬಂದು ಸಂಘಟನೆ ಮಾಡಲು ಹೇಳಿ ಎಂದು ಮಲ್ಲಿಕಾರ್ಜುನ ಖರ್ಗೆಗೆ ತಿಳಿಸಿದರು ಎನ್ನಲಾಗಿದೆ.

ಈ ವೇಳೆ ಮಲ್ಲಿಕಾರ್ಜುನ ಖರ್ಗೆ, ಬೆಳಗಾವಿ ವಿಚಾರದಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವ ಭರವಸೆ ನಾನು ನೀಡುತ್ತಿದ್ದೇನೆ. ಲೋಕಸಭೆ ಚುನಾವಣೆ ಹತ್ತಿರವಿರುವಾಗ ಹಾಗೂ ಕಾಂಗ್ರೆಸ್‌ ಪಕ್ಷ ಸಂಕಷ್ಟದಲ್ಲಿರುವಾಗ ಪಕ್ಷದ ನಿಷ್ಠಾವಂತ ನಾಯಕರಾದ ನೀವು ಈ ರೀತಿ ಮಾಡುವುದು ಸರಿಯಲ್ಲ. ಬೆಳಗಾವಿಗೆ ಬಂದು ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತೇನೆ. ಹೀಗಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ, ಯಾವುದೇ ಗೊಂದಲಗಳಿಗೆ ಅವಕಾಶ ನೀಡಬೇಡಿ ಎಂದು ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಆದರೆ ಸತೀಶ್‌ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು ಹಾಗೂ ತಾವು ಹೇಳಿದವರಿಗೊಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಯಾವುದೇ ಭರವಸೆ ನೀಡಿಲ್ಲ. ದೊಡ್ಡ ಮಟ್ಟದ ಬೇಡಿಕೆಗಳ ಬಗ್ಗೆ ಹೈಕಮಾಂಡ್‌ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಹೈಕಮಾಂಡ್‌ಗೆ ನಿಮ್ಮ ನೋವು ತಿಳಿಸುತ್ತೇನೆ. ಆದರೆ, ಸಂಕಷ್ಟದ ಸ್ಥಿತಿಯಲ್ಲಿ ಪಕ್ಷದ ಜತೆಗೆ ಇರುವ ಮೂಲಕ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಇದಕ್ಕೆ ಜಾರಕಿಹೊಳಿ ಸಹೋದರರು ಭಾಗಶಃ ಒಪ್ಪಿಗೆ ಸೂಚಿಸಿದರು ಎಂದು ತಿಳಿದು ಬಂದಿದೆ.

ಶಾಸಕರೊಂದಿಗೆ ದಿನೇಶ್‌ ಸಂಧಾನ:  ಕೆಪಿಸಿಸಿ ಕಚೇರಿಯಲ್ಲಿ ಅತೃಪ್ತ ಹಾಗೂ ಬಿಜೆಪಿ ಸಂಪರ್ಕಿಸುತ್ತಿರುವ ಶಾಸಕರನ್ನು ಕರೆಸಿಕೊಂಡು ಸಭೆ ನಡೆಸಿದ ದಿನೇಶ್‌ ಗುಂಡೂರಾವ್‌, ಯಾವುದೇ ಕಾರಣಕ್ಕೂ ಬಿಜೆಪಿ ಆಮಿಷಕ್ಕೆ ಒಳಗಾಗಬಾರದು. ಪಕ್ಷ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಸಿದ್ಧವಿದೆ. ಬಿಜೆಪಿ ಜತೆ ಹೋದರೆ ನಿಮ್ಮ ಭವಿಷ್ಯಕ್ಕೆ ಕುಂದುಂಟಾಗುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಕೆಲ ಶಾಸಕರ ಮನವೊಲಿಸಿದರು.

ಬಳಿಕ ಶಾಸಕರಾದ ಆನಂದ್‌ಸಿಂಗ್‌, ನಾಗೇಂದ್ರ, ಪ್ರತಾಪ್‌ಗೌಡ ಪಾಟೀಲ್‌ ಅವರನ್ನು ಅಕ್ಕಪಕ್ಕ ಕುಳ್ಳಿರಿಸಿಕೊಂಡು ಸುದ್ದಿಗೋಷ್ಠಿ ನಡೆಸಿದ ಅವರು, ಈ ಯಾರೂ ಶಾಸಕರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಬದಲಿಗೆ ಬಿಜೆಪಿ ಶಾಸಕರೇ ನಮ್ಮ ಸಂಪರ್ಕದಲ್ಲಿದ್ದಾರೆ. ಬಿಜೆಪಿಯು ಇದೇ ಧೋರಣೆ ಮುಂದುವರೆಸಿದರೆ ನಾವು ತಿರುಗೇಟು ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದಲ್ಲದೆ, ಸಮ್ಮಿಶ್ರ ಸರ್ಕಾರದ ಬಗ್ಗೆ ಹಾಗೂ ಸೂಕ್ತ ಸ್ಥಾನಮಾನ ನೀಡದ ಕಾರಣ ಪಕ್ಷದ ಬಗ್ಗೆ ಅಸಮಾಧಾನಗೊಂಡಿರುವ ಶಾಸಕರನ್ನು ದೂರವಾಣಿ ಮೂಲಕ ಸಂಪರ್ಕಿಸಿದರು. ಈ ವೇಳೆ ಹೊಸಕೋಟೆ ಶಾಸಕ ಎಂ.ಟಿ.ಬಿ.ನಾಗರಾಜ್‌, ರಹೀಂ ಖಾನ್‌, ತುಕಾರಾಂ, ಶ್ರೀಮಂತ ಬಾಳ ಸಾಹೇಬ್‌ ಪಾಟೀಲ್‌, ಮಹೇಶ್‌ ಕುಮಟಳ್ಳಿಯನ್ನು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳವಾರ ದಿನೇಶ್‌ ಗುಂಡೂರಾವ್‌ ಜತೆ ಪಕ್ಷ ಬಿಟ್ಟುಹೋಗುವವರನ್ನು ತಡೆಯುವ ಬಗ್ಗೆ ಸರಣಿ ಸಭೆ ನಡೆಸಿದ್ದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಬುಧವಾರ ಪಕ್ಷದ ಶಾಸಕರನ್ನು ಭದ್ರಪಡಿಸಿಕೊಳ್ಳುವ ತೆರೆಮರೆಯ ಪ್ರಯತ್ನ ಮುಂದುವರೆಸಿದರು ಎಂದು ತಿಳಿದುಬಂದಿದೆ. ಈ ಮೂಲಕ ಕಾಂಗ್ರೆಸ್‌ನಲ್ಲಿರುವ ಅಸಮಾಧಾನ ಶಮನಗೊಳಿಸಲು ಮಲ್ಲಿಕಾರ್ಜುನ ಖರ್ಗೆ, ದಿನೇಶ್‌ ಗುಂಡೂರಾವ್‌ ಹಾಗೂ ಪರಮೇಶ್ವರ್‌ ಅವರು ಮೂವರೂ ಸಹ ಪ್ರಯತ್ನಿಸುತ್ತಿದ್ದಾರೆ. ಆದರೆ, ಅಂತಿಮವಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಯಾರ ಕೈ ಮೇಲಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಎಲ್ಲರೂ ಒಟ್ಟಾಗಿದ್ದೇವೆ- ಕೊಂಡಯ್ಯ:  ಬೆಳಗಾವಿ ಜತೆಗೆ ಬಳ್ಳಾರಿಯಲ್ಲೂ ಡಿ.ಕೆ.ಶಿವಕುಮಾರ್‌ ಅವರಿಂದ ಸಮಸ್ಯೆ ಉಂಟಾಗಿದೆ ಎಂಬ ಹಿನ್ನೆಲೆಯಲ್ಲಿ ಕೆ.ಸಿ.ಕೊಂಡಯ್ಯ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಇದಕ್ಕೂ ಮೊದಲು ಕೊಂಡಯ್ಯ ರಮೇಶ್‌ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಖರ್ಗೆ ಅವರ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೊಂಡಯ್ಯ, ನಮ್ಮಲ್ಲಿ ಡಿ.ಕೆ. ಶಿವಕುಮಾರ್‌ ಅವರಿಂದ ಯಾವುದೇ ಸಮಸ್ಯೆ ಉಂಟಾಗಿಲ್ಲ. ಡಿ.ಕೆ. ಶಿವಕುಮಾರ್‌ ನಮ್ಮ ಜಿಲ್ಲೆಯನ್ನು ಉತ್ತಮವಾಗಿ ನೋಡಿಕೊಳ್ಳುತ್ತಿದ್ದಾರೆ ಎಂದರು.


ನಮ್ಮಲ್ಲಿ ಭಿನ್ನಾಭಿಪ್ರಾಯಗಳು ಇರುವುದು ನಿಜ. ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕನಾಗಿ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಬೇಕಾಗುತ್ತದೆ. ಹೀಗಾಗಿ ಕೆಲ ಶಾಸಕರು ನನ್ನನ್ನು ಸಂಪರ್ಕಿಸಿರುವುದು ನಿಜ. ಪಕ್ಷದ ಸಮಸ್ಯೆಗಳನ್ನು ಪಕ್ಷದ ವೇದಿಕೆಯಲ್ಲೇ ಚರ್ಚಿಸಿಕೊಳ್ಳುತ್ತೇವೆ. ಸಿದ್ದರಾಮಯ್ಯ ಅವರು ನಮ್ಮ ಅಹಿಂದ ನಾಯಕ. ಮಲ್ಲಿಕಾರ್ಜುನ ಖರ್ಗೆ ಅವರು ನಮಗೆ ತಂದೆ ಸಮಾನ. ಹೀಗಾಗಿ ಅವರೊಂದಿಗೆ ಚರ್ಚಿಸಿ ಅವರ ಸಲಹೆಯಂತೆ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ.

- ರಮೇಶ್‌ ಜಾರಕಿಹೊಳಿ, ಸಚಿವ

ಸಮ್ಮಿಶ್ರ ಸರ್ಕಾರ ಬೀಳುವ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಎಲ್ಲವೂ ಊಹಾಪೋಹವಷ್ಟೆ. ಡಾ.ಕೆ. ಸುಧಾಕರ್‌ ಸೇರಿದಂತೆ ಎಲ್ಲಾ ಶಾಸಕರೊಂದಿಗೆ ನಾನು ಖುದ್ದು ಮಾತನಾಡಿದ್ದೇನೆ. ಯಾರೂ ಸಹ ಪಕ್ಷ ಬಿಡುವ ಚಿಂತನೆಯಲ್ಲಿ ಇಲ್ಲ. ಮೊದಲಿನಿಂದಲೂ ಸಚಿವ ಡಿ.ಕೆ. ಶಿವಕುಮಾರ್‌ ಹಾಗೂ ಜಾರಕಿಹೊಳಿ ಸಹೋದರರು ಒಟ್ಟಾಗಿಯೇ ಇದ್ದರು. ಇದೀಗ ಸಣ್ಣ ವಿಚಾರಗಳಿಗೆ ಮನಸ್ತಾಪ ಉಂಟಾಗಿದ್ದು, ಎಲ್ಲವನ್ನೂ ಬಗೆಹರಿಸುವ ಭರವಸೆಯನ್ನು ಜಾರಕಿಹೊಳಿ ಸಹೋದರರಿಗೆ ನೀಡಿದ್ದೇನೆ. ಹೀಗಾಗಿ ಯಾವ ಸಮಸ್ಯೆಯೂ ಇಲ್ಲ.

- ಡಾ.ಜಿ. ಪರಮೇಶ್ವರ್‌, ಉಪ ಮುಖ್ಯಮಂತ್ರಿ

Follow Us:
Download App:
  • android
  • ios