ಈ ಹಿಂದೆ ಅಭ್ಯರ್ಥಿಗಳ ಆಯ್ಕೆಗೆ ಅಮೆರಿಕ ಮಾದರಿಯಲ್ಲಿ ಆಂತರಿಕ ಚುನಾವಣೆ ನಡೆಸಿ, ಅದಕ್ಕೆ ಪಕ್ಷದೊಳಗೇ ಸಾಕಷ್ಟು ವಿರೋಧ ಎದುರಿಸಿದ್ದ ರಾಹುಲ್‌ ಗಾಂಧಿ, ಇದೀಗ ಪಕ್ಷದ ಅತ್ಯುನ್ನತ ನೀತಿ ನಿರೂಪಣಾ ವಿಭಾಗವಾದ, ಪಕ್ಷದ ಅತ್ಯಂತ ಹಿರಿಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ಸಿಡಬ್ಲ್ಯುಸಿಯ ಸದಸ್ಯ ಸ್ಥಾನಕ್ಕೂ ಚುನಾವಣೆ ನಡೆಸುವ ಬಗ್ಗೆ ಪ್ರಸ್ತಾಪ ಮುಂದಿಟ್ಟಿದ್ದಾರೆ.
ನವದೆಹಲಿ: ಈ ಹಿಂದೆ ಅಭ್ಯರ್ಥಿಗಳ ಆಯ್ಕೆಗೆ ಅಮೆರಿಕ ಮಾದರಿಯಲ್ಲಿ ಆಂತರಿಕ ಚುನಾವಣೆ ನಡೆಸಿ, ಅದಕ್ಕೆ ಪಕ್ಷದೊಳಗೇ ಸಾಕಷ್ಟು ವಿರೋಧ ಎದುರಿಸಿದ್ದ ರಾಹುಲ್ ಗಾಂಧಿ, ಇದೀಗ ಪಕ್ಷದ ಅತ್ಯುನ್ನತ ನೀತಿ ನಿರೂಪಣಾ ವಿಭಾಗವಾದ, ಪಕ್ಷದ ಅತ್ಯಂತ ಹಿರಿಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ಸಿಡಬ್ಲ್ಯುಸಿಯ ಸದಸ್ಯ ಸ್ಥಾನಕ್ಕೂ ಚುನಾವಣೆ ನಡೆಸುವ ಬಗ್ಗೆ ಪ್ರಸ್ತಾಪ ಮುಂದಿಟ್ಟಿದ್ದಾರೆ. ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪಕ್ಷದಲ್ಲಿ ಆಂತರಿಕ ಬದಲಾವಣೆ ತರಲು ಹೊರಟಿರುವುದಕ್ಕೆ ಒಳಗೊಳಗೇ ವಿರೋಧ ವ್ಯಕ್ತವಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಅವರ ಈ ನಿರ್ಧಾರಕ್ಕೆ ಪೂರಕವೆಂಬಂತೆ ಸದ್ಯ ಸಿಂಗಾಪುರ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಶೀಘ್ರವೇ ಹೊಸ ಕಾಂಗ್ರೆಸ್ ಪಕ್ಷವನ್ನು ತೆರೆದಿಡಲಿದ್ದೇವೆ ಎಂದು ಹೇಳುವ ಮೂಲಕ, ಪಕ್ಷದಲ್ಲಿ ದೊಡ್ಡ ಮಟ್ಟಬದಲಾವಣೆಯ ಸುಳಿವು ನೀಡಿದ್ದಾರೆ.
ಚುನಾವಣೆ: ಪಕ್ಷದ ನಿರ್ಣಾಯಕ ಸಮಿತಿ ಎನ್ನಿಸಿಕೊಂಡಿರುವ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯನ್ನು (ಸಿಡಬ್ಲ್ಯುಸಿ) ವಿಸರ್ಜಿಸಿರುವ ರಾಹುಲ್, ಸಮಿತಿಯ 12 ಸ್ಥಾನಗಳಿಗೆ ಚುನಾವಣೆ ನಡೆಸಲು ಉದ್ದೇಶಿಸಿದ್ದಾರೆ. ಸಮಿತಿ 24 ಸ್ಥಾನ ಹೊಂದಿದ್ದರೂ 12 ಸ್ಥಾನಗಳನ್ನು ಚುನಾವಣೆ ಮೂಲಕ ಭರ್ತಿ ಮಾಡುವ ಉದ್ದೇಶ ರಾಹುಲ್ ಅವರದು. ಕಾಂಗ್ರೆಸ್ನ ಪ್ರತಿನಿಧಿಗಳು ಈ 12 ಜನರನ್ನು ಚುನಾಯಿಸುತ್ತಾರೆ.
ಒಂದು ವೇಳೆ ಚುನಾವಣೆ ನಡೆದರೆ, 19 ವರ್ಷದಿಂದ ನಾಮನಿರ್ದೇಶನವನ್ನೇ ಪದ್ಧತಿ ಮಾಡಿಕೊಂಡಿದ್ದ ತಾಯಿ ಸೋನಿಯಾ ಗಾಂಧಿ ಅವರ ಪರಂಪರೆ ಮುರಿದಂತಾಗುತ್ತದೆ. ಆದರೆ 1992 ಹಾಗೂ 97ರಲ್ಲಿ ಚುನಾವಣೆಗಳು ನಡೆದಿದ್ದವು. ಆಗ ಪಕ್ಷಾಧ್ಯಕ್ಷರಾದ ಪಿ.ವಿ. ನರಸಿಂಹರಾವ್ ಹಾಗೂ ಸೀತಾರಾಂ ಕೇಸರಿ ಅವರ ನಾಯಕತ್ವ ಒಪ್ಪಲು ಅನೇಕರು ತಯಾರಿರಲಿಲ್ಲ. ಹೀಗಾಗಿ ಚುನಾವಣೆಗಳು ನಡೆದಿದ್ದವು.
ಆದರೆ ರಾಹುಲ್ ಅವರು ಚುನಾವಣೆ ನಡೆಸುವುದಕ್ಕೆ ಹಿರಿಯರು ವಿರೋಧ ವ್ಯಕ್ತಪಡಿಸಿದ್ದು, ನಾಮನಿರ್ದೇಶನ ಪದ್ಧತಿಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಮುಂದಿನ ವಾರ ದಿಲ್ಲಿಯಲ್ಲಿ ನಡೆಯುವ ಕಾಂಗ್ರೆಸ್ ಮಹಾಧಿವೇಶನದಲ್ಲಿ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
