ಹೈದರಾಬಾದ್(ಮೇ.11): ಕುರ್ಚಿಗಾಗಿ ರಾಜಕೀಯ ನಾಯಕರು ಬಡಿದಾಡಿಕೊಳ್ಳುವುದು ಭಾರತದಲ್ಲಿ ಸಾಮಾನ್ಯ ಸಂಗತಿ ಏನಲ್ಲ ಬಿಡಿ. ಅದರಂತೆ ಟಿಆರ್‌ಎಸ್ ಸರ್ಕಾರದ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಕುರ್ಚಿಗಾಗಿ ಎಲ್ಲರ ಸಮ್ಮುಖದಲ್ಲೇ ಬಡಿದಾಡಿಕೊಂಡ ಘಟನೆ ಹೈದಾರಾಬಾದ್‌ನಲ್ಲಿ ನಡೆದಿದೆ.

ತೆಲಂಗಾಣದ ಹಿರಿಯ ಕಾಂಗ್ರೆಸ್ ನಾಯಕ ವಿ. ಹನುಮಂತ್ ರಾವ್ ಮತ್ತು ನಾಗೇಶ್ ಮುದ್ದಿರಾಜು ಕುರ್ಚಿಗಾಗಿ ಬಡಿದಾಡಿಕೊಂಡಿದ್ದು, ನಾಯಕರ ಜಗಳ ಕಂಡು ನೆರೆದ ಜನಸ್ತೋಮ ನಕ್ಕು ನಕ್ಕು ಸುಸ್ತಾಗಿದ್ದಾರೆ.

ತೆಲಂಗಾಣದ 10ನೇ ತರಗತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿಪಕ್ಷಗಳು ಟಿಆರ್‌ಎಸ್ ಸರ್ಕಾರದ ವಿರುದ್ಧ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದ್ದವು.  ಈ ವೇಳೆ ಮಾತನಾಡಲು ಎದ್ದು ನಿಂತ ವಿ ಹನುಮಂತ್ ರಾವ್ ಅವರ ಕುರ್ಚಿಯನ್ನು ನಾಗೇಶ್ ಮುದ್ದಿರಾಜು ಆ ವೇಳೆ ಬಂದ ಮತ್ತೋರ್ವ ನಾಯಕರಿಗೆ ಕೊಟ್ಟಿದ್ದಾರೆ.

ಇದರಿಂದ ಕೋಪಗೊಂಡ ಹನುಮಂತ್ ರಾವ್, ಕೂಡಲೇ ನಾಗೇಶ್ ಅವರನ್ನು ತಳ್ಳಿ ಹೊಡೆಯಲು ಮುಂದಾಗಿದ್ದಾರೆ. ಇದರಿಂದ ಮುಜುಗರಕ್ಕೀಡಾದ ನಾಗೇಶ್ ಕೂಡ ಹನುಮಂತ್ ರಾವ್ ಮೇಲೆ ಕೈ ಮಾಡಿದ್ದಾರೆ. ಇಬ್ಬರೂ ನಾಯಕರ ಜಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಾಂಗ್ರೆಸ್ ತೀವ್ರ ಮುಜುಗರಕ್ಕೀಡಾಗಿದೆ.