ಬೆಂಗಳೂರು :  ಸಮ್ಮಿಶ್ರ ಸರ್ಕಾರವನ್ನು ಅತಂತ್ರಗೊಳಿಸಲು ಬಿಜೆಪಿ ನಾಯಕರು ಆಪರೇಷನ್‌ ಕಮಲಕ್ಕೆ ಮುಂದಾಗಿದ್ದಾರೆ. ಖುದ್ದು ಬಿಜೆಪಿ ಶಾಸಕ ಬಿ. ಶ್ರೀರಾಮುಲು ಅವರ ಆಪ್ತ ಕಾರ್ಯದರ್ಶಿ ಹಾಗೂ ಸ್ನೇಹಿತರು ಕಾಂಗ್ರೆಸ್‌ ಶಾಸಕರ ಖರೀದಿ ಬಗ್ಗೆ ಮಾತನಾಡುತ್ತಿರುವ ಆಡಿಯೋ ಬಹಿರಂಗಗೊಂಡಿದ್ದು, ಬಿಜೆಪಿ ನಾಯಕರ ವಿರುದ್ಧ ಕ್ರಿಮಿನಕಲ್‌ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಕಾಂಗ್ರೆಸ್‌ ನಾಯಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ವಿಧಾನಪರಿಷತ್‌ ಸದಸ್ಯ ರಿಜ್ವಾನ್‌ ಅರ್ಷದ್‌, ಎಂ.ಡಿ.ಲಕ್ಷ್ಮೇನಾರಾಯಣ ಅವರ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಮಾಜಿ ಸಚಿವ ಜನಾರ್ದನ ರೆಡ್ಡಿ, ಶಾಸಕ ಬಿ.ಶ್ರೀರಾಮುಲು ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಮಂಗಳವಾರ ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್‌ಕುಮಾರ್‌ ಅವರಿಗೆ ದೂರು ನೀಡಲಾಗಿದೆ.

ಪ್ರತಿ ಶಾಸಕನಿಗೆ 25 ಕೋಟಿ ರು. ಆಮಿಷ:

ದೂರಿನಲ್ಲಿ ಬಿಜೆಪಿ ನಾಯಕರು ಹತ್ತು ಮಂದಿ ಕಾಂಗ್ರೆಸ್‌ ಶಾಸಕರಿಗೆ ಪ್ರತಿಯೊಬ್ಬರಿಗೆ 25 ಕೋಟಿ ರು. ಆಮಿಷವೊಡ್ಡಿದ್ದಾರೆ ಎಂದು ಕಾಂಗ್ರೆಸ್‌ ಆರೋಪ ಮಾಡಿದೆ. ಡಿ.3ರಂದು ವಿವಿಧ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾದ 3.44 ನಿಮಿಷದ ಧ್ವನಿ ಮುದ್ರಣದಲ್ಲಿ ಬಿಜೆಪಿ ಶಾಸಕ ಬಿ.ಶ್ರೀರಾಮುಲು ಅವರ ಆಪ್ತ ಕಾರ್ಯದರ್ಶಿ ಹಾಗೂ ಶ್ರೀರಾಮುಲು ಸ್ನೇಹಿತ, ದುಬೈ ಮೂಲದ ಉದ್ಯಮಿ ಮಾತನಾಡಿರುವ ಧ್ವನಿ ಇದೆ.

ಕಾಂಗ್ರೆಸ್‌ ಶಾಸಕರಾದ ರಮೇಶ್‌ ಜಾರಕಿಹೊಳಿ, ಸತೀಶ್‌ ಜಾರಕಿಹೊಳಿ, ಆನಂದ್‌ ಸಿಂಗ್‌, ನಾಗೇಂದ್ರ, ಗಣೇಶ್‌, ಭೀಮಾನಾಯಕ್‌, ಬಿ.ಸಿ.ಪಾಟೀಲ್‌, ಪ್ರತಾಪ್‌ಗೌಡ ಪಾಟೀಲ್‌ ಸೇರಿ ಹತ್ತು ಮಂದಿ ಶಾಸಕರನನ್ನು ಸೆಳೆಯಲು ಪ್ರಯತ್ನಿಸಿದ್ದಾರೆ. ದುಬೈನ ಉದ್ಯಮಿ ಪ್ರತಿ ಶಾಸಕರಿಗೂ 25 ಕೋಟಿ ರು. ಹಣ, ಉಪ ಚುನಾವಣೆ ವೆಚ್ಚ ಭರಿಸಲಾಗುವುದು. ಅಲ್ಲದೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿರುವುದಾಗಿ ವಿವಿಧ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿದೆ.

ವಾಹಿನಿಗಳಲ್ಲಿ ಪ್ರಸಾರವಾದ ಧ್ವನಿ ಸುರುಳಿ ಹಾಗೂ ಪತ್ರಿಕಾ ವರದಿಗಳ ಸಹಿತ ದೂರು ನೀಡಿದ್ದು, ಶಾಸಕರ ಖರೀದಿಗೆ ಮುಂದಾದವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಸಂವಹನಾ ವಿಭಾಗದ ಅಧ್ಯಕ್ಷ ರಿಜ್ವಾನ್‌ ಅರ್ಷದ್‌ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಬಿಜೆಪಿಗೆ ಭಯೋತ್ಪಾದಕರ ಹಣ:  ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಿಜ್ವನ್‌ ಅರ್ಷದ್‌, ಬಿಜೆಪಿಯು ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಅಂತರಾಷ್ಟ್ರೀಯ ಮಟ್ಟದಲ್ಲಿ ಸಹಾಯ ಪಡೆಯಲು ಯತ್ನಿಸಿದೆ. ಬಿಜೆಪಿಯ ಈ ಪ್ರಯತ್ನಗಳನ್ನು ಗಮನಿಸಿದರೆ ಬಿಜೆಪಿಯವರಿಗೆ ಭಯೋತ್ಪಾದಕರು ಏನಾದರೂ ಹಣ ನೀಡುತ್ತಿದ್ದಾರೆಯೇ ಎಂಬ ಅನುಮಾನವೂ ಹುಟ್ಟಿದೆ ಎಂದು ಆರೋಪಿಸಿದರು.

 

ಬೆಂಕಿ ಇಲ್ಲದೆ ಹೊಗೆ ಬರೋದಿಲ್ಲ. ಎಲ್ಲ ಬೆಳವಣಿಗೆ ಗಮನದಲ್ಲಿದ್ದು, ನಮ್ಮ ಕೆಲಸ ನಾವೂ ಮಾಡುತ್ತಿದ್ದೇವೆ. ವಿಶೇಷ ಎಂದರೆ, ಬಿಜೆಪಿಯ ಒಂದು ತಂಡಕ್ಕೆ ಅದೇ ಪಕ್ಷದ ಮತ್ತೊಂದು ತಂಡ ಏನು ಮಾಡುತ್ತಿದೆ ಎಂದು ಗೊತ್ತಿಲ್ಲ. ಆಡಿಯೋ ನಕಲಿ ಎನ್ನುತ್ತಿರುವ ಶೆಟ್ಟರ್‌, ಸಿ.ಟಿ.ರವಿ, ಕೋಟ ಶ್ರೀನಿವಾಸ್‌ ಪೂಜಾರಿ ಅವರಿಗೆ ಬಿಜೆಪಿಯ ಮತ್ತೊಂದು ತಂಡ ಆಪರೇಷನ್‌ ನಡೆಸುತ್ತಿರುವ ಮಾಹಿತಿಯೇ ಇಲ್ಲ.

- ಡಿ.ಕೆ.ಶಿವಕುಮಾರ್‌, ಸಚಿವ