ಮೈಸೂರು [ಜು.04];  ಬಿಜೆಪಿಯವರು ಆಪರೇಷನ್‌ ಕಮಲ ಮಾಡುತ್ತಿಲ್ಲ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಆ ಕಾರ್ಯದಲ್ಲಿ ನಿರತರಾಗಿಲ್ಲ ಎಂಬ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರ ಹೇಳಿಕೆಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯ ರಾಜಕೀಯದಲ್ಲಿ ಇಬ್ಬರು ಶಾಸಕರ ರಾಜೀನಾಮೆ ವಿಚಾರವಾಗಿ ಗೊಂದಲ ಸೃಷ್ಟಿಯಾಗಿರುವ ವೇಳೆಯಲ್ಲೇ ಈ ಇಬ್ಬರು ಹಿರಿಯ ನಾಯಕರು ಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ.

ರಾಜ್ಯ ಸರ್ಕಾರ ಬೀಳಿಸೋದು ರಾಜ್ಯ ಬಿಜೆಪಿ ನಾಯಕರ ಕೈಯಲ್ಲಿ ಇಲ್ಲ. ಅದೇನಿದ್ದರೂ ಅಮಿತ್‌ ಶಾ ಮತ್ತು ಪ್ರಧಾನಿ ಮೋದಿ ಕೈಯ್ಯಲ್ಲಿದೆ. ಬಜೆಟ್‌ ಮತ್ತು ಅಧಿವೇಶನದ ಕಡೆಗೆ ಗಮನಹರಿಸುತ್ತಿರುವ ಅವರು ರಾಜ್ಯ ಮೈತ್ರಿ ಸರ್ಕಾರಕ್ಕೆ ಅಭದ್ರತೆ ಸೃಷ್ಟಿಸುವ ಕಾರ್ಯ ಮಾಡುತ್ತಿಲ್ಲ. ಹಾಗಾಗಿ ಯಾರು ಯಾರ ಮೇಲೂ ಕೆಸರು ಎರಚುವ ಪ್ರಶ್ನೆಯೇ ಇಲ್ಲ ಎಂದು ಜಿ.ಟಿ.ದೇವೇಗೌಡರು ಮಂಗಳವಾರವಷ್ಟೇ ಹೇಳಿಕೆ ನೀಡಿದ್ದರು.

ಈ ವಿಚಾರವಾಗಿ ಬುಧವಾರ ಮೈಸೂರಿನಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಿದ್ದರಾಮಯ್ಯ, ಬಿಜೆಪಿಯು ಆಪರೇಷನ್‌ ಕಮಲ ಮಾಡುತ್ತಿಲ್ಲ ಎಂಬ ಸಚಿವ ಜಿ.ಟಿ.ದೇವೇಗೌಡ ಹೇಳಿಕೆ ನೋಡಿದರೆ ಆತನಿಗೆ ಆ ವಿಚಾರ ಗೊತ್ತಿಲ್ಲದಿರಬಹುದು. ಆತನಿಗೆ ಆ ರೀತಿಯ ಮಾಹಿತಿ ಇರಬಹುದು. ಆದರೆ ಬಿಜೆಪಿಯವರು ಆಪರೇಷನ್‌ ಕಮಲ ಮಾಡ್ತಿದ್ದಾರೆ. ಸ್ವತಃ ಅಮಿತ್‌ ಶಾ, ಮೋದಿ ಹಣ ಮತ್ತು ಅಧಿಕಾರದ ಬಲ ಪ್ರಯೋಗಿಸಿ ಆಪರೇಷನ್‌ ಕಮಲ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರನ್ನು ತೆಕ್ಕೆಗೆ ಎಳೆದುಕೊಂಡು ಅವರು ತಮ್ಮದೇ ಸ್ವಂತ ಸರ್ಕಾರವನ್ನು ರಚಿಸಲು ಕಳೆದ ಒಂದು ವರ್ಷದಿಂದ ಪ್ರಯತ್ನಿಸುತ್ತಲೇ ಇದ್ದಾರೆ. ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದರು. ಇದೇವೇಳೆ ಬಿಜೆಪಿ ನಡೆಸುತ್ತಿರುವ ಆಪರೇಷನ್‌ ಕಮಲಕ್ಕೆ ವಿರುದ್ಧ ರಿವರ್ಸ್‌ ಆಪರೇಷನ್‌ ನಡೆಸುವ ವಿಚಾರದಲ್ಲಿ ನನಗೆ ನಂಬಿಕೆಯಿಲ್ಲ. ಅದರ ಅಗತ್ಯವೂ ಇಲ್ಲ ಎಂದು ಹೇಳಿದ್ದಾರೆ.

ಜಿಟಿಡಿ ತಿರುಗೇಟು: ಇದಕ್ಕೆ ಪ್ರತಿಕ್ರಿಯಿಸಿರುವ ಜಿ.ಟಿ.ದೇವೇಗೌಡರು, ನಾನು ನಿನ್ನೆ ನೀಡಿದ್ದ ಹೇಳಿಕೆಗೆ ಈಗಲೂ ಬದ್ಧ. ಮುಂದೆಯೂ ಬದ್ಧ. ಬಿಜೆಪಿಯವರು ಈಗ ಅಪರೇಷನ್‌ ಕಮಲ ಮಾಡುತ್ತಿಲ್ಲ. ಮೋದಿ ಮತ್ತೆ ಪ್ರಧಾನಿಯಾದ ಮೇಲೆ ಅದು ನಿಂತಿದೆ. ಸಮ್ಮಿಶ್ರ ಸರ್ಕಾರ ರಚನೆ ಆದಾಗ ಅವರು ಆಪರೇಷನ್‌ ಕಮಲಕ್ಕೆ ಯತ್ನಿಸಿದ್ದರು. ಆದರೆ ಈಗ ಅದು ಇಲ್ಲ ಎಂದು ತಿಳಿಸಿದರು. ಜನಾದೇಶದ ಪ್ರಕಾರ ರಾಷ್ಟ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇದ್ದಾರೆ. ಇದನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಕೇಂದ್ರದಲ್ಲಿ ನರೇಂದ್ರ ಮೋದಿ ಐದು ವರ್ಷ ಅಧಿಕಾರ ನಡೆಸುತ್ತಾರೆ. ರಾಜ್ಯದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಇನ್ನೂ ನಾಲ್ಕು ವರ್ಷ ಅಧಿಕಾರ ನಡೆಸುತ್ತಾರೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದ್ದು ಯಾವುದೇ ತೊಂದರೆ ಇಲ್ಲ ಎಂದರು.