ಬೆಂಗಳೂರು :  ಕೆಲದಿನಗಳಿಂದ ಹಿಂದೆ ತೀವ್ರಸ್ವರೂಪ ಪಡೆದಿದ್ದ ದೋಸ್ತಿ ಪಕ್ಷಗಳ ನಡುವಿನ ತಿಕ್ಕಾಟ, ಕಿತ್ತಾಟ ಇನ್ನೇನು ಸಮ್ಮಿಶ್ರ ಸರ್ಕಾರವನ್ನು ಕೆಡವಿಯೇ ಬಿಡಲಿದೆ ಎಂಬ ಹಂತದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ನಾಯಕರು ದಿಢೀರ್‌ ಥಂಡಾ ಆಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಹೇಳಿಕೆಯ ಬೆನ್ನಲ್ಲೇ ಹೇಳಿಕೆಗಳ ಸಮರ ನಡೆಸಿದ್ದ ಉಭಯ ಪಕ್ಷಗಳ ನಾಯಕರು ಮಂಗಳವಾರ ಬಾಯಿಗೆ ಬೀಗ ಜಡಿದುಕೊಂಡಿದ್ದಾರೆ. ದೋಸ್ತಿಗಳ ನಡುವಿನ ತಿಕ್ಕಾಟ ಸಮ್ಮಿಶ್ರ ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಸ್ಪಷ್ಟಎನ್ನುವುದು ಅರಿವಿಗೆ ಬರುತ್ತಿದ್ದಂತೆ ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಂದೆ ನಿಂತು ಭಿನ್ನಮತ ಶಮನಕ್ಕೆ ಪ್ರಯತ್ನ ನಡೆಸಿದ್ದಾರೆ. 

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ನಡೆಸಿದ್ದಾರೆ. ಸಿದ್ದರಾಮಯ್ಯಗೆ ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ಹೊರಟ್ಟಿ, ಕಾಶೆಂಪೂರ್‌ ಮತ್ತು ಜಿ.ಟಿ.ದೇವೇಗೌಡರಂಥ ಜೆಡಿಎಸ್‌ ನಾಯಕರೂ ಸಾಥ್‌ ನೀಡಿ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿದೆ ಎನ್ನುವ ಸಂದೇಶ ರವಾನಿಸುವ ಪ್ರಯತ್ನ ನಡೆಸಿದ್ದಾರೆ.

ಹೀಗೆ ಸ್ವತಃ ಸಿದ್ದರಾಮಯ್ಯ ಅವರೇ ಫೀಲ್ಡಿಗಿಳಿದು ಬಿಕ್ಕಟ್ಟು ಶಮನದ ನೇತೃತ್ವದ ವಹಿಸಿದ ಹಿನ್ನೆಲೆಯಲ್ಲಿ ಸದ್ಯಕ್ಕೆ ದೋಸ್ತಿಗಳ ನಡುವೆ ಸೃಷ್ಟಿಯಾಗಿದ್ದ ಯುದ್ಧದ ಕಾರ್ಮೋಡ ಸದ್ಯಕ್ಕೆ ತಣ್ಣಗಾಗಿದೆ. ಒಂದು ಹಂತದಲ್ಲಿ ತಾರಕಕ್ಕೇರಿದ್ದ ದೋಸ್ತಿಗಳ ನಡುವಿನ ಹೇಳಿಕೆಗಳ ಸಮರಕ್ಕೆ ಸದ್ಯಕ್ಕೆ ಕದನ ವಿರಾಮ ಘೋಷಣೆಯಾಗಿದೆ.

ನಾವು ಮಾತನಾಡಿದ್ದೇವೆæ: ಒಂದೇ ಹೋಟೆಲ್‌ನಲ್ಲಿದ್ದರೂ ಕುಮಾರಸ್ವಾಮಿ-ಸಿದ್ದರಾಮಯ್ಯ ಭೇಟಿಯಾಗಿಲ್ಲ ಎನ್ನುವ ಸುದ್ದಿ ತೀವ್ರ ಚರ್ಚೆ, ಊಹಾಪೋಹಗಳಿಗೆ ಕಾರಣವಾಗುತ್ತಿದ್ದಂತೆ ಸ್ವತಃ ಸಿದ್ದರಾಮಯ್ಯ ಅವರೇ ಈ ಕುರಿತ ಗೊಂದಲಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದರು. ‘ಮುಖ್ಯಮಂತ್ರಿ ಭೇಟಿಯಾಗದಿರುವ ಹಿಂದೆ ಯಾವುದೇ ಉದ್ದೇಶವಿಲ್ಲ. ನಾನು ಹೋಟೆಲ್‌ಗೆ ಹೋಗುವುದರೊಳಗೆ ಅವರು ಹೋದರು ಎಂಬ ಮಾಹಿತಿ ಬಂತು. ಹೀಗಾಗಿ ಭೇಟಿ ಸಾಧ್ಯವಾಗಲಿಲ್ಲ. ಆದರೆ, ಅವರ ಜತೆಗೆ ಫೋನ್‌ ಮೂಲಕ ಮೂಲಕ ಮಾತನಾಡಿದ್ದೇನೆ’ ಎಂದೂ ಸ್ಪಷ್ಟನೆ ನೀಡಿದರು.

ಏತನ್ಮಧ್ಯೆ, ದೋಸ್ತಿಗಳ ನಡುವಿನ ತಿಕ್ಕಾಟವನ್ನೇ ಮುಂದಿಟ್ಟುಕೊಂಡು ಸಮ್ಮಿಶ್ರ ಸರ್ಕಾರ ಪತನ ಆಗಲಿದೆ ಎಂದು ಭವಿಷ್ಯ ನುಡಿಯುತ್ತಿರುವ ಬಿಜೆಪಿ ಮುಖಂಡರ ವಿರುದ್ಧ ಮಂಗಳವಾರ ಕುಂದಗೋಳದಲ್ಲಿ ಸಿದ್ದರಾಮಯ್ಯ ತೀವ್ರ ಹರಿಹಾಯ್ದರು. ‘ಬಿಜೆಪಿಯವರಿಗೆ ಬರೀ ಬೆಂಕಿ ಹಚ್ಚುವುದೇ ಕೆಲಸ. ಆ ಕೆಲಸದಲ್ಲಿ ಅವರು ನಿಸ್ಸೀಮರು, ಸಮ್ಮಿಶ್ರ ಸರ್ಕಾರ ಉತ್ತಮವಾಗಿ ಆಡಳಿತ ನಡೆಸುತ್ತಿದೆ. ದೋಸ್ತಿ ಸರ್ಕಾರ ನಾಲ್ಕು ವರ್ಷ ಸುಭದ್ರವಾಗಿದೆ, ಮೈತ್ರಿ ಸರ್ಕಾರ ಉರುಳುತ್ತದೆ ಎಂಬುದೆಲ್ಲ ಕನಸಿನ ಮಾತು, ಅವರ ಆ ಕನಸು ಯಾವತ್ತೂ ನನಸಾಗಲ್ಲ’ ಎಂದು ಗುಡುಗಿದರು.

ತಿಕ್ಕಾಟ ಮಾಮೂಲು-ಡಿಕೆಶಿ: ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಕುಂದಗೋಳದಲ್ಲಿ ಪ್ರಚಾರದಲ್ಲಿ ಬ್ಯುಸಿಯಾಗಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಕೂಡ ದೋಸ್ತಿಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಬಿಂಬಿಸುವ ಪ್ರಯತ್ನ ಮಾಡಿದರು. ‘ಎಲ್ಲಾ ಪಕ್ಷಗಳಲ್ಲಿ ಈ ರೀತಿಯ ತಿಕ್ಕಾಟ ಮಾಮೂಲು. ಯಾರೋ ಅವರವರ ವೈಯಕ್ತಿಕ ಲಾಭಕ್ಕಾಗಿ ಮಾತನಾಡಿದರೆ ಯಾಕೆ ತಲೆಕೆಡಿಸಿಕೊಳ್ಳಬೇಕು. ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ ಎಂದು ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ’ ಎಂದು ತಿಳಿಸಿದರು.

ಜೆಡಿಎಸ್‌ನಿಂದಲೂ ತೇಪೆ: ದೋಸ್ತಿ ಪಕ್ಷಗಳ ಮುಖಂಡರ ನಡುವೆ ನಡೆಯುತ್ತಿರುವ ವಾಕ್ಸಮರದಿಂದ ಜನರಿಗೆ ತಪ್ಪುಸಂದೇಶ ರವಾನೆಯಾಗುತ್ತಿದೆ ಎನ್ನುವುದು ಅರ್ಥವಾಗುತ್ತಿದ್ದಂತೆ ಜೆಡಿಎಸ್‌ ಮುಖಂಡರು ಕೂಡ ಮುಂದೆ ನಿಂತು ಎಲ್ಲ ಗೊಂದಲಗಳಿಗೆ ತೇಪೆ ಹಚ್ಚಿದರು. ಒಂದೇ ಹೋಟೆಲ್‌ನಲ್ಲಿದ್ದು ಸಿದ್ದರಾಮಯ್ಯ-ಕುಮಾರಸ್ವಾಮಿ ಭೇಟಿಯಾಗಿಲ್ಲ ಎನ್ನುವ ವಿಚಾರ ಭಾರೀ ಚರ್ಚೆಗೆ ಕಾರಣವಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಪಕ್ಷದ ಮುಖಂಡರಾದ ಬಸವರಾಜ ಹೊರಟ್ಟಿಮತ್ತು ಬಂಡೆಪ್ಪ ಕಾಶೆಂಪೂರ್‌, ದೋಸ್ತಿ ಪಕ್ಷಗಳಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾವು ಸಹೋದರಂತಿದ್ದೇವೆ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮೊಬೈಲ್‌ ಮೂಲಕ ಪರಸ್ಪರ ಮಾತನಾಡಿಕೊಂಡಿದ್ದಾರೆ. ಮೈತ್ರಿ ನಾಯಕರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಸ್ಪಷ್ಟನೆ ನೀಡಿದರು.

ಇದರ ಬೆನ್ನಲ್ಲೇ ಮತ್ತೊಬ್ಬ ಜೆಡಿಎಸ್‌ ಮುಖಂಡ, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಕೂಡ ಮಾತನಾಡಿ, ಇನ್ನು ಮುಂದೆ ಯಾವುದೇ ನಾಯಕರು ಬಹಿರಂಗವಾಗಿ ಮಾತನಾಡುವುದಿಲ್ಲ. ಎರಡೂ ಪಕ್ಷಗಳ ಮುಖಂಡರು ಪರಸ್ಪರ ಕೂತು ಮಾತನಾಡಿದ್ದು, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ, ಒಂದೇ ತಟ್ಟೆಯಲ್ಲಿ ಊಟ ಮಾಡುವ ಸನ್ನಿವೇಶವೂ ಇದೆ ಎಂದು ತಿಳಿಸಿದರು.