ಕಲಬುರಗಿ :  ದೋಸ್ತಿ ಪಕ್ಷಗಳ ಶಾಸಕರಲ್ಲಿ ಅಸಮಧಾನವಿದೆ, ಉಭಯ ಪಕ್ಷಗಳ 20ಕ್ಕೂ ಹೆಚ್ಚು ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸಿಡಿಸಿರುವ ಬಾಂಬ್‌ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಅಧಿಕಾರ, ದುಡ್ಡಿನಾಸೆಗೆ ನಮ್ಮ ಶಾಸಕರು ಬಲಿಯಾಗಲ್ಲ. ಹಿಂದೆ ಸರ್ಕಾರ ರಚನೆಯ ಅವಕಾಶ ಸಿಕ್ಕರೂ ಮೂರೇ ದಿನದಲ್ಲಿ ಮನೆಗೆ ಹೋದವರಿಗೆ ಈಗ ಮತ್ತೆ ಅಧಿಕಾರ ಹಿಡಿಯುವ ಮಾತನ್ನಾಡಲು ನಾಚಿಕೆಯಾಗಬೇಕು ಎಂದು ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ಸರ್ಕಾರ ರಚಿಸಲು ಅವಕಾಶ ನೀಡಿಲ್ಲವೇ? ಆಗ ಬಹುಮತ ಸಾಬೀತು ಪಡಿಸಲಾಗದೆ ಮೂರೇ ದಿನದಲ್ಲಿ ಮನೆಗೆ ಹೋದವರು ಅವರು. ಈಗ ಪದೇ ಪದೆ 20 ಶಾಸಕರು ಬರ್ತಾರೆ ಅಂತ ಹೇಳಿಕೆ ನೀಡುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರು ಹತಾಶೆಯಿಂದ ಏನು ಬೇಕಾದರೂ ಹೇಳಿಕೆ ನೀಡುತ್ತಾರೆ. ಅಧಿಕಾರ, ದುಡ್ಡಿನ ಆಸೆ-ಆಮಿಷದಿಂದ ಶಾಸಕರನ್ನು ಸೆಳೆಯುವ ಅವರ ಪ್ರಯತ್ನಕ್ಕೆ ನಮ್ಮ ಯಾವ ಶಾಸಕರೂ ಸೊಪ್ಪು ಹಾಕಲ್ಲ. ಈಗಾಗಲೇ ಇಂಥ ಪ್ರಯತ್ನ ಮಾಡಿ ಅನೇಕ ಸಲ ಸೋತಿದ್ದಾರೆ, ಅವರಿಗೆ ಮಾಡಲು ಬೇರೆ ಕೆಲಸವೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಮೈತ್ರಿ ಸರ್ಕಾರ ರಚನೆಯಾದಾಗಿನಿಂದಲೂ ಸಮ್ಮಿಶ್ರ ಸರ್ಕಾರ ಕೆಡಹುವ, ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎನ್ನುವ ಹೇಳಿಕೆ ಕೊಡುತ್ತಾ ಬಂದಿದ್ದಾರೆ. ಒಬ್ಬೊಬ್ಬ ಶಾಸಕರಿಗೆ 50 ಕೋಟಿ ಕೊಡಲಾಗುತ್ತಿದೆ ಎಂಬ ಮಾತಿದೆ. ಇಷ್ಟೊಂದು ಹಣ ಎಲ್ಲಿಂದ ಬಂತು ಎಂಬುದನ್ನು ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಯಡಿಯೂರಪ್ಪ ಜನತೆಗೆ ಹೇಳಲಿ ನೋಡೋಣ ಎಂದು ಸಿದ್ದು ಸವಾಲು ಹಾಕಿದರು.