ಕಾಂಗ್ರೆಸ್‌ ಶವ ಪೆಟ್ಟಿಗೆಗೆ ಕಾಗೋಡು ತಿಮ್ಮಪ್ಪರಿಂದ ಕೊನೆ ಮೊಳೆ | ಜೆಡಿಎಸ್‌ ಮೈತ್ರಿಯಿಂದ ಕಾಂಗ್ರೆಸ್‌ ಮಾನ ಹರಾಜು: ಉಮೇಶ್‌ ವರ್ಮ ಆರೋಪ | ಉಪಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್‌ ಮಾನ ಹರಾಜು 

ಶಿವಮೊಗ್ಗ (ಅ. 24): ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಂದ ಸುತ್ತಿಗೆ ಪಡೆದಿರುವ ಕಾಂಗ್ರೆಸ್‌ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ, ಕಾಂಗ್ರೆಸ್‌ನ ಶವದ ಪೆಟ್ಟಿಗೆಗೆ ಕೊನೆ ಮೊಳೆ ಹೊಡೆದಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಎಸ್‌.ಉಮೇಶ್‌ ವರ್ಮ ಟೀಕಿಸಿದರು.

ಉಪಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್‌ ಮಾನವನ್ನೇ ಹರಾಜು ಹಾಕಿದ್ದಾರೆ. ಈಗ ಜೆಡಿಎಸ್‌ಗೆ ಶಿವಮೊಗ್ಗ ಕ್ಷೇತ್ರವನ್ನು ಬಿಟ್ಟುಕೊಡುವ ಮೂಲಕ ಜಿಲ್ಲಾ ಕಾಂಗ್ರೆಸ್‌ನ್ನು ಮೂರು ಭಾಗವಾಗಿ ಮಾಡಿದ್ದಾರೆ. ಈಗಿರುವ ಸ್ಥಿತಿ ನೋಡಿದರೆ ಕಾಂಗ್ರೆಸ್‌ ಮತ್ತೆ ತನ್ನ ಶಕ್ತಿಯನ್ನು ಪಡೆದುಕೊಳ್ಳಲು ಹಲವು ದಶಕಗಳೇ ಬೇಕಾಗುತ್ತದೆ ಎಂದರು.

ಕಾಗೋಡು ತಿಮ್ಮಪ್ಪ ಅವರನ್ನು ಹಿರಿಯ ರಾಜಕಾರಣಿ, ಸಜ್ಜನ ರಾಜಕಾರಣಿ ಎಂದೆಲ್ಲ ಕರೆಯುತ್ತಾರೆ. ಆದರೆ ಇವರು ಕಾಂಗ್ರೆಸ್‌ ಪಕ್ಷವನ್ನೇ ದುರ್ಬಲಗೊಳಿಸಿ ನಾಶದ ಅಂಚಿಗೆ ತಂದು ನಿಲ್ಲಿಸಿದ್ದಾರೆ. ಸ್ವಜನ ಪಕ್ಷಪಾತಕ್ಕೆ ಹೆಸರಾದವರು. ಬ್ರಾಹ್ಮಣ, ವೀರಶೈವ, ಅಹಿಂದಗಳನ್ನು ತುಳಿದವರು. ತಮ್ಮ ಎದುರಾಳಿಗೆ ಈಗ ಸಹಾಯ ಮಾಡಲು ಹೊರಟಿದ್ದಾರೆ. ಇದ್ಯಾವ ಚುನಾವಣೆಯ ಯುದ್ಧದ ನೀತಿ ಎಂದು ಪ್ರಶ್ನಿಸಿದರು.

ಮುಂಬರುವ ದಿನದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಹುನ್ನಾರ ನಡೆದಿದೆ. ಪಕ್ಷವನ್ನು ಕಾಗೋಡು ತಿಮ್ಮಪ್ಪ 20 ವರ್ಷ ಹಿಂದಕ್ಕೆ ಕೊಂಡೊಯ್ದಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಹುನ್ನಾರ ಕಾಂಗ್ರೆಸ್‌ನಿಂದಲೇ ನಡೆದಿದೆ ಎಂದು ಆರೋಪಿಸಿದರು.