ಬೆಂಗಳೂರು[ಸೆ.05]:  ದೇಶದ ಆರ್ಥಿಕ ಪರಿಸ್ಥಿತಿ ಹಾಳಾಗಿ ಇಡೀ ದೇಶದ ಅಭಿವೃದ್ಧಿಯೇ ಕುಸಿಯುತ್ತಿದೆ. ತನ್ನ ವೈಫಲ್ಯ ಮರೆಮಾಚಿ ರಾಜಕೀಯ ಲಾಭ ಪಡೆಯಲು ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಡಾಂತರ ತರುವ ಕೆಲಸಗಳನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ನಡೆಸಲು ಹಾಗೂ ರಾಜ್ಯಾದ್ಯಂತ ಬಿಜೆಪಿ ಕುತಂತ್ರದ ಬಗ್ಗೆ ಜನಾಭಿಪ್ರಾಯ ಮೂಡಿಸಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಬಂಧನದ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲು ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸಂಜೆ ನಡೆದ ಕಾಂಗ್ರೆಸ್‌ ಹಿರಿಯ ನಾಯಕರ ಸಭೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಡಾಂತರ ಒದಗಿ ಬಂದಿದೆ. ಹೀಗಾಗಿ ಬಿಜೆಪಿ ಷಡ್ಯಂತ್ರವನ್ನು ಎಲ್ಲರೂ ಒಗ್ಗಟ್ಟಿನಿಂದ ಎದುರಿಸಬೇಕಾಗಿದೆ. ಕೇಂದ್ರ ಸರ್ಕಾರದ ವಂಚನೆ, ಮೋಸಕ್ಕೆ ತಕ್ಕ ಉತ್ತರ ನೀಡಲು ಜನಾಭಿಪ್ರಾಯ ಮೂಡಿಸುತ್ತೇವೆ. ಪ್ರತಿಯೊಂದನ್ನೂ ಜನರಿಗೆ ತಿಳಿಸುವ ಕೆಲಸ ಮಾಡಲು ಸಭೆಯಲ್ಲಿ ನಿರ್ಧರಿಸಿದ್ದೇವೆ ಎಂದು ಹೇಳಿದರು.

ಆರ್ಥಿಕತೆ ಸುಧಾರಿಸುವುದಾದರೆ ನಮ್ಮನ್ನೂ ಬಂಧಿಸಿ:  ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ಮಾತನಾಡಿ, ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಶಿವಕುಮಾರ್‌ ಬಂಧಿಸಿದರೆ ದೇಶದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದರೆ ನಮ್ಮನ್ನೆಲ್ಲಾ ಬಂಧಿಸಿ ಎಂದು ಸವಾಲು ಎಸೆದರು.

ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ ಮಾತನಾಡಿ, ಸಾಂವಿಧಾನಿಕ ಸಂಸ್ಥೆಗಳನ್ನು ರಾಜಕೀಯ ಎದುರಾಳಿಗಳ ಧ್ವನಿ ಅಡಗಿಸಲು ದಾಳವಾಗಿ ಬಳಸಲಾಗುತ್ತಿದೆ. ಈ ಮೂಲಕ ಪ್ರಜಾಪ್ರಭುತ್ವ ನಾಶ ಮಾಡುವ ಪ್ರಯತ್ನ ಬಿಜೆಪಿ ಮಾಡುತ್ತಿದೆ. ದೇಶದ ಜನರು ಹಾಗೂ ಮಾಧ್ಯಮಗಳು ವಾಕ್‌ ಸ್ವಾತಂತ್ರ್ಯದ ರಕ್ಷಣೆಗೆ ಬರಬೇಕು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಮುದಾಯದಲ್ಲಿ ಆತಂಕ ಮೂಡಿದೆ:  ಮಾಜಿ ಸಚಿವ ಎನ್‌.ಚೆಲುವರಾಯಸ್ವಾಮಿ ಮಾತನಾಡಿ, ಶಿವಕುಮಾರ್‌ ಕೇವಲ ಒಕ್ಕಲಿಗ ಸಮುದಾಯದ ಮುಖಂಡ ಅಲ್ಲ. ಇಡೀ ಕರ್ನಾಟಕ ರಾಜ್ಯಾದ್ಯಂತ ಡಿ.ಕೆ. ಶಿವಕುಮಾರ್‌ ತಮ್ಮ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಶಿವಕುಮಾರ್‌ ಬಂಧನ ಸಹಜವಾಗಿಯೇ ಸಮುದಾಯದಲ್ಲಿ ಆತಂಕ ಮೂಡಿಸಿದೆ. ಇದು ಅವಶ್ಯಕತೆ ಇತ್ತೇ ಎಂಬ ಮಾತು ಕೇಳಿಬರುತ್ತಿದೆ. ದ್ವೇಷ ಸಾಧನೆಗಾಗಿಯೇ ಮಾಡಿದ್ದಾರೆಯೇ ಎಂದು ಸಮುದಾಯದಲ್ಲಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.