ಮಾಜಿ ಸಚಿವ ಎಂಪಿ ಪಾಟೀಲ್ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದು ಅಲ್ಲದೇ ಸಂಪುಟ ವಿಸ್ತರಣೆ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯಪುರ[ನ.29]  ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಯಾರೂ ಬಗ್ಗಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ, ಶಾಸಕ ಎಂ ಬಿ ಪಾಟೀಲ್ ಹೇಳಿಕೆ ನೀಡಿದ್ದಾರೆ.

ವಿಜಯಪುರದಲ್ಲಿ ಮಾತನಾಡಿ, ಸಿದ್ದರಾಮಯ್ಯ ಅತ್ಯುನ್ನತ ನಾಯಕರು. ಅವರು ಐದು ವರ್ಷ ಆಡಳಿತ ನಡೆದಿದ್ದು ಇತಿಹಾಸ. ಸಿದ್ದರಾಮಯ್ಯ ಶಕ್ತಿಶಾಲಿ, ಧೃಢತೆಯ ನಾಯಕರು ಎಂದು ಸಿದ್ದು ಪರ ಬ್ಯಾಟ್ ಬೀಸಿದರು.

ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಮತ್ತಷ್ಟು ಚುರುಕಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಖಾಲಿ ಇರುವ ಸಚಿವ ಸ್ಥಾನ ತುಂಬಿದರೆ ಸರ್ಕಾರದ ಆಡಳಿತಕ್ಕೆ ಶಕ್ತಿ ಬರುತ್ತದೆ. ಜೊತೆಗೆ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕವೂ ಆಗಬೇಕು. ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾಗಿದೆ. ಉತ್ತಮ‌ ಕೆಲಸ ಮಾಡಿದ್ದು, ಇನ್ನೂ ಹೆಚ್ಚಿನ ಕೆಲಸದ ನಿರೀಕ್ಷೆಯಿದೆ ಎಂದರು.

ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಯಬೇಕು. ಪಕ್ಷದ ಮುಖಂಡರ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡ ಪಕ್ಷದ ಅಭ್ಯರ್ಥಿಗಳ ಸಭೆ‌ ನಡೆಸಬೇಕಿದೆ. ಇದು ಪಕ್ಷವನ್ನು ಬಲ‌ ಪಡಿಸಲು ಸಹಾಯಕವಾಗುತ್ತದೆ ಎಂದು ಹೇಳಿದರು.

ಮುಂದಿನ‌ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದು ಸ್ವಂತ ಬಲದ ಮೇಲೆ ಅಧಿಕಾರ ನಡೆಸಬಹುದು. ಕಳೆದ ಬಾರಿ ಅಧಿಕಾರದಲ್ಲಿದ್ದ ವೇಳೆ ಉತ್ತಮ‌ ಕೆಲಸ ಮಾಡಿದರೂ ನಮಗೆ ಕಡಿಮೆ ಸ್ಥಾನ ಬಂದಿದೆ ಎಂದು ಚುನಾವಣಾ ಫಲಿತಾಂಶದ ಪರಾಮರ್ಶೆ ಮಾಡಿದರು.

ಇನ್ನು ಡಿಕೆಶಿ ಹಾಗೂ ಯಡಿಯೂರಪ್ಪ ಭೇಟಿಗೆ ಮಹತ್ವ ನೀಡುವ ಅವಶ್ಯಕತೆಯಿಲ್ಲ. ಮುಂದೆ ಅಭಿವೃದ್ಧಿ ಕೆಲಸಕ್ಕಾಗಿ ಬಿಎಸ್ವೈ ಕುಮಾರಸ್ವಾಮಿ ಭೇಟಿಯಾಗಬಹುದು. ಇದೆಲ್ಲ ಅಭಿವೃದ್ಧಿ ರಾಜಕಾರಣದಲ್ಲಿ ಸಾಮಾನ್ಯ ಎಂದು ಪಾಟೀಲ್ ಹೇಳಿದರು.

ಗೋಲಗೇರಿಯಲ್ಲಿ ದೇವೇಗೌಡ ಹಾಗೂ ಸಚಿವ ಮನಗೂಳಿ ಪುತ್ಥಳಿಗೆ ಬೆಂಕಿ ಹಚ್ಚಿದ ಘಟನೆಗೆ ವಿರೋಧ ವ್ಯಕ್ತಪಡಿಸಿದ ಪಾಟೀಲ್ ಇಂಥ ಘಟನೆಗಳ ನಡೆಯಬಾರದು. ಬೆಂಕಿ ಹಚ್ಚಿದ ದುಷ್ಕರ್ಮಿಗಳಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಬುದ್ದಿ ಜೀವಿಗಳ ಬಗ್ಗೆ ವಿಜಯಪುರ ನಗರ ಶಾಸಕ‌ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವರಿಗೆ ಸಮಯವಿದೆ ಮಾತನಾಡುತ್ತಾರೆ. ಅವರ ಎಲ್ಲ ಹೇಳಿಕೆಗಳಿಗೂ ಪ್ರತಿಕ್ರಿಯೆ ನೀಡಬೇಕೆಂದರೆ ನಿತ್ಯ ಎರಡು ಸುದ್ದಿಗೋಷ್ಠಿ ನಡೆಸಬೇಕಾಗುತ್ತದೆ ಎದಂದು ವ್ಯಂಗ್ಯವಾಡಿದರು.