ತುಮಕೂರು [ಜು.22]: ತುಮಕೂರು ಡಿಸಿಸಿ ಬ್ಯಾಂಕ್‌ ಸೂಪರ್‌ಸೀಡ್‌ ಆಗಿರುವುದಕ್ಕೆ ದೇವೇಗೌಡರ ಕುಟುಂಬ ಮತ್ತು ಝೀರೋ ಟ್ರಾಫಿಕ್‌ ಮಂತ್ರಿ ಡಾ.ಜಿ.ಪರಮೇಶ್ವರ್‌ ಅವರ ಕುತಂತ್ರವೇ ಡಿಸಿಸಿ ಬ್ಯಾಂಕ್‌ ಸೂಪರ್‌ ಸೀಡ್‌ ಆದೇಶಕ್ಕೆ ಕಾರಣ ಎಂದು ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಆರೋಪಿಸಿದ್ದಾರೆ. 

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಸೋಲಿಗೆ ನಾನೇ ಕಾರಣ ಎಂಬ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಹೀಗೆ ಮಾಡಿದ್ದಾರೆ. ಆದರೆ ಅವರ ಸೋಲಿಗೆ ನಾನೊಬ್ಬನೇ ಕಾರಣನಲ್ಲ. ನನ್ನದು ಇರುವುದು ಒಂದೇ ವೋಟು. ಕ್ಷೇತ್ರ ಮತದಾರರು ಅವರನ್ನು ತಿರಸ್ಕರಿಸಿದ್ದಾರೆ. ಅದಕ್ಕೆ ನನ್ನೊಬ್ಬನನ್ನೇ ಹೊಣೆ ಮಾಡಿದರೆ ನಾನೇನು ಮಾಡಲಿ ಎಂದರು. 

ಭಾರತೀಯ ರಿಸವ್‌ರ್‍ ಬ್ಯಾಂಕ್‌ನ ಅನುಮತಿ ಪಡೆಯದೇ ಕಾನೂನುಗಳನ್ನು ಗಾಳಿಗೆ ತೂರಿ, ನನಗೆ ಯಾವುದೇ ರೀತಿಯ ನೋಟಿಸ್‌ ನೀಡದೇ ರಾಜಕೀಯ ದ್ವೇಷ, ಹಗೆತನದ ಹಿನ್ನೆಲೆಯಲ್ಲಿ ಸೂಪರ್‌ ಸೀಡ್‌ ಮಾಡಲಾಗಿದೆ ಎಂದು ಆರೋಪಿಸಿದರು. ಈ ಸರ್ಕಾರ ಸೋಮವಾರ ಸಂಜೆಯೊಳಗೆ ಬೀಳುವುದು ನಿಶ್ಚಿತವಾಗಿದ್ದು, ಸರ್ಕಾರ ಬಿದ್ದ ನಂತರ ಎರಡು-ಮೂರು ದಿನದೊಳಗೆ ಮತ್ತೆ ನಮ್ಮದೇ ಆಡಳಿತ ಮಂಡಳಿ ಅಧಿಕಾರಕ್ಕೆ ಬರುವ ರೀತಿ ಮತ್ತೆ ಆದೇಶ ಮಾಡಿಸಿಕೊಂಡು ಬರುತ್ತೇವೆ ಎಂದು ತಿಳಿಸಿದರು.