ಕೋಲಾರ :  ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೋಲಿನ ಬಗ್ಗೆ ನೋವು ತೋಡಿಕೊಂಡ ಸಂದರ್ಭದಲ್ಲೇ ಸಂಸದ ಮುನಿಯಪ್ಪ ಅವರೂ ಅವರ ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್‌ ನಡೆಸಿದ್ದಾರೆ. ‘ಸಿದ್ದರಾಮಯ್ಯ ಅವರು ಸೋತರೂ ನಮಗೆ ಅವರೇ ಮುಖ್ಯಮಂತ್ರಿ, ಸಿದ್ದರಾಮಯ್ಯ ಬೆಂಬಲ ನೀಡದಿದ್ದರೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಲೇ ಇರಲಿಲ್ಲ. ಸಿದ್ದರಾಮಯ್ಯ ಅವರು ಮಾರ್ಗದರ್ಶನದ ಮೇರೆ ಸರ್ಕಾರ ನಡೆಯುತ್ತಿದೆ’ ಎಂದು ಹೇಳಿದ್ದಾರೆ.

ನಗರದಲ್ಲಿ ಹಮ್ಮಿಕೊಂಡಿದ್ದ ಕನಕ ಜಯಂತಿ ಉತ್ಸವದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಯಾಗಿದ್ದರೂ ಶೋಷಿತ ದಲಿತ ಸಮುದಾಯಕ್ಕೆ ಸಿದ್ದರಾಮಯ್ಯ ರೀತಿ ಸವಲತ್ತುಗಳನ್ನು ಕಲ್ಪಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

ಕಚ್ಚಿಸಿಕೊಂಡವರು ಕೇಳಲಿ:

ಕಾರ್ಯಕ್ರಮಕ್ಕೆ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವು, ಚೇಳು, ತಿಗಣೆಗಳಿಂದ ಕಚ್ಚಿಸಿಕೊಂಡವರು ನೇರವಾಗಿ ಬಂದು ಕೇಳಲಿ ನಾನೂ ಉತ್ತರ ಕೊಡುತ್ತೇನೆ. ಅದು ಬಿಟ್ಟು ಯಾರೋ ಎಲ್ಲಿಯೋ ಮಾತಾಡಿದರೆ ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ತಿಳಿಸಿದರು.

ಇತ್ತೀಚೆಗೆ ಕೋಲಾರದಲ್ಲಿ ನಡೆದ ವಿಧಾನಸಭಾ ಪರಿಷತ್‌ ಸದಸ್ಯ ನಸೀರ್‌ ಅಹಮದ್‌ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ‘ರಕ್ತ ಹೀರುವ ಹಾವು, ಚೇಳು ತಿಗಣೆಗಳಿವೆ. ಈ ಬಾರಿ ಚುನಾವಣೆ ವೇಳೆ ಎಚ್ಚರದಿಂದ ಮತದಾನ ಮಾಡಿ’ ಎಂದು ಸಂಸದ ಕೆ.ಎಚ್‌.ಮುನಿಯಪ್ಪ ಅವರ ವಿರುದ್ಧ ಪರೋಕ್ಷವಾಗಿ ಟೀಕೆ ಮಾಡಿದ್ದರು. ಈ ಸಂಬಂಧ ಕೋಲಾರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು ಯಾರೂ ಕೂಡಾ ನನ್ನ ಹೆಸರು ಹೇಳಿಕೊಂಡು ಮಾತಾಡಿಲ್ಲ. ಅವರು ನನ್ನ ಹೆಸರು ಹೇಳಿ ಮಾತಾಡಲಿ ಆಗ ಅದಕ್ಕೆ ಉತ್ತರಿಸುತ್ತೇನೆ ಎಂದರು.

ನಾನು 7 ಬಾರಿ ಗೆದ್ದಿದ್ದೇನೆ. ಪ್ರತಿಭಾರಿಯೂ ಇದೇ ರೀತಿಯ ಹಗ್ಗ ಜಗ್ಗಾಟ ನಡೆದಿದೆ, ನನ್ನ ವಿರುದ್ಧ ಹೋರಾಟ ಮಾಡಿದವರು ಚುನಾವಣೆ ವೇಳೆ ನನ್ನೊಟ್ಟಿಗೆ ಒಂದಾಗಿ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಈ ಬಾರಿಯೂ ಅದೇ ರೀತಿ ಆಗುತ್ತದೆ ಎಂದರು.