ನವದೆಹಲಿ[ಸೆ.21]: ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವದ ದಿನ ನೀಡಿದ ಹೇಳಿಕೆಗೆ ಕಾಂಗ್ರೆಸ್‌ ಮುಖಂಡ, ಕೇಂದ್ರದ ಮಾಜಿ ಸಚಿವ ಜಿತಿನ್‌ ಪ್ರಸಾದ್‌ ಪ್ರತಿಕ್ರಿಯಿಸಿ, ಈ ಸಂಬಂಧ ಮೋದಿ ಹೊಸದೇನನ್ನೂ ಹೇಳಿಲ್ಲ. ಕಾಂಗ್ರೆಸ್‌ ಈ ಹಿಂದೆಯೇ ಈ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನ ನಡೆಸಿತ್ತು ಎಂದಿದ್ದಾರೆ.

ಅಲ್ಲದೆ, ಕಾಂಗ್ರೆಸ್‌ ಸೇರಿದಂತೆ ಪ್ರತಿಯೊಂದು ರಾಜಕೀಯ ಪಕ್ಷಗಳೂ ‘ಇಬ್ಬರು ಮಕ್ಕಳು ಸಾಕು’ ಎಂಬ ಪ್ರಮಾಣಕ್ಕೆ ಬದ್ಧರಾಗಿರುವಂತೆ ನೋಡಿಕೊಳ್ಳಬೇಕು ಎಂದಿರುವ ಅವರು, 2020ರ ವೇಳೆಗೆ ಇದು ಕಡ್ಡಾಯವಾಗಿ ರೂಢಿಸಿಕೊಳ್ಳುವಂತೆ ಪಕ್ಷ ಅಥವಾ ಚುನಾವಣಾ ಆಯೋಗವೇ ಜಾಗೃತಿ ಮೂಡಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರು ಈ ನಿಟ್ಟಿನಲ್ಲಿ ಪಕ್ಷದಲ್ಲಿ ಇದನ್ನು ಎಲ್ಲರೂ ಅಳವಡಿಸಿಕೊಳ್ಳುವಂತೆ ಗಮನ ಹರಿಸುತ್ತಾರೆನ್ನುವ ವಿಶ್ವಾಸವಿದೆ. 1998ರಲ್ಲಿ ಎಐಸಿಸಿ ಇಟ್ಟಮಹತ್ವದ ಹೆಜ್ಜೆಯನ್ನು ಇಂದು ಬಿಜೆಪಿ, ಪ್ರಧಾನಿ ಮೋದಿ ಅಳವಡಿಸಿಕೊಳ್ಳಲು ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.