ನವದೆಹಲಿ [ಅ.04]: ವಿಧಾನ ಸಭೆಯ ಶಾಸಕಾಂಗ ಪಕ್ಷದ ನಾಯಕರ ಸ್ಥಾನದ ಮೇಲೆ ಕಣ್ಣಿಟ್ಟಿರುವ ಎಚ್.ಕೆ.ಪಾಟೀಲ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಭೇಟಿ ಮಾಡಲು ದೆಹಲಿಗೆ ತೆರಳಿದ್ದಾರೆ. 

ಈ ವೇಳೆ ಮಾತನಾಡಿದ ಮಾಜಿ ಸಚಿವ ಎಚ್.ಕೆ.ಪಾಟೀಲ್ ರಾಜ್ಯಕ್ಕೆ ಇನ್ನೂ ಸಿಗದ ಪ್ರವಾಹ ಪರಿಹಾರದ ಬಗ್ಗೆ ಪ್ರಸ್ತಾಪಿಸಿದರು. ಪ್ರವಾಹ ಪರಿಹಾರ ಪ್ರಸ್ತಾವನೆಯನ್ನು ಕೇಂದ್ರ ತಿರಸ್ಕರಿಸಿದ್ದು ನಾಚಿಕೆಗೇಡು. ಜನರ ನೋವಿನ ಜೊತೆಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಟವಾಡುತ್ತಿದೆ.  ಇದರಿಂದ ಜನರ ಶಾಪ ಅವರಿಗೆ ತಟ್ಟುತ್ತದೆ ಎಂದರು. 

ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ಯಾಕೆ‌ ಈ ರೀತಿಯಾದ ಅನ್ಯಾಯ ಮಾಡುತ್ತಿದೆ.  ರಾಜ್ಯ ಸರ್ಕಾರ ಪ್ರವಾಹದ ವಿಚಾರದಲ್ಲಿ ನೀಡಿರುವ ವರದಿಯ ಅಂಕಿ ಅಂಶಗಳಲ್ಲಿ ಲೋಪ ಇದ್ದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕರೆಸಿ ವಿಚಾರಣೆ ಮಾಡಲಿ. ಬೊಕ್ಕಸ ಖಾಲಿಯಾಗಿದ್ದರೆ ಸಾಲ ಮಾಡಿ ಪರಿಹಾರ ನೀಡಲಿ. ಇಲ್ಲವಾದಲ್ಲಿ ಕುರ್ಚಿ ಬಿಡಲಿ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  
ರಾಜ್ಯದಲ್ಲಿ 25 ಬಿಜೆಪಿ ಸಂಸದರಿದ್ದರೂ ಕೂಡ ಪ್ರವಾಹದಿಂದ ನಲುಗಿದ ರಾಜ್ಯಕ್ಕೆ ಪರಿಹಾರ ತರುವಲ್ಲಿ ವಿಫಲರಾಗಿದ್ದಾರೆ. ಕೇಂದ್ರ ಸರ್ಕಾರದಿಂದ ನೆರವು ಕೇಳಲು ಹಿಂಜರಿಯುತ್ತಿರುವುದು ದುರಾದೃಷ್ಟಕರ ಎಂದು ಎಚ್.ಕೆ.ಪಾಟೀಲ್ ಹೇಳಿದರು.