ಮಂಡ್ಯ [ಜು.15] : ರಾಜ್ಯ ರಾಜಕಾರಣದಲ್ಲಿ ಅಸಮಾಧಾನ ಮುಂದುವರಿದಿದ್ದು, ಇದೇ ವೇಳೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಮಾಜಿ ಜೆಡಿಎಸ್ ನಾಯಕ ಚೆಲುವರಾಯ ಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. 

ಮಂಡ್ಯದಲ್ಲಿ ಮಾತನಾಡಿದ ಚೆಲುವರಾಯ ಸ್ವಾಮಿ ರೈತರು ಜಿಲ್ಲೆಯಲ್ಲಿ ನಿರಂತರವಾಗಿ ನೀರಿಗಾಗಿ ಹೋರಾಟ ಮಾಡುತ್ತಿದ್ದಾರೆ. ಜಿಲ್ಲೆಯ ಜನರ ಬಗ್ಗೆ ಸರ್ಕಾರದ ತೀರ್ಮಾನ ಏನು ಎಂದು ಪ್ರಶ್ನೆ ಮಾಡಿದ್ದು,  ಸಿಎಂ ಮಂಡ್ಯ ಜನರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಜಿಲ್ಲೆಯಲ್ಲಿರುವ ಶಾಸಕರು, ಮಂತ್ರಿಗಳು ಜನರು, ಸರ್ಕಾರದ ಜೊತೆ ಚರ್ಚೆ ಮಾಡಿ ಜಿಲ್ಲೆಯ ಸಮಸ್ಯೆ ಪರಿಹರಿಸಲು ತೀರ್ಮಾನ ತೆಗೆದು ಕೊಳ್ಳುತ್ತಿದ್ದರು. ಈಗ ಪ್ರಾಧಿಕಾರದ ಕಡೆ ಕೈ ತೋರಿಸುತ್ತಾರೆ. ಆದರೆ ನೀರು ಕೊಡಲು ನಿಮ್ಮ ಪ್ರಯತ್ನ ಏನು ಎಂದು ಸಿಎಂಗೆ ಪ್ರಶ್ನೆ ಮಾಡಿದ್ದಾರೆ. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 ನಮಗೆ ಪಕ್ಷಕ್ಕಿಂತ ಹೆಚ್ಚಾಗಿ ಜಿಲ್ಲೆಯ ಜನರ ಕಾಳಜಿ ಮುಖ್ಯ. ಈ ಮಟ್ಟದ ತಾತ್ಸಾರ ಎಂದಿಗೂ ಮಾಡಿರಲಿಲ್ಲ. ಈ ರೀತಿಯ ನಡೆ ಒಳ್ಳೆಯದಲ್ಲ. ನೀರಿನ ಬಗ್ಗೆ ಮುಖ್ಯಮಂತ್ರಿಯವರ ಬಳಿ ಕೇಳಿದರೆ  ದಿಲ್ಲಿಗೆ ಹೋಗಿ ಎನ್ನುತ್ತಾರೆ. ಹಾಗಾದ್ರೆ ಇವರು ಇರೋದು ಯಾಕೆ..? ಮುಖ್ಯಮಂತ್ರಿ ಆಗಿ ಮುಂದುವರಿಯಲು ವಹಿಸುವ ಕಾಳಜಿಯಷ್ಟೇ ಜಿಲ್ಲೆಯ ಜನರ ಬಗ್ಗೆಯೂ ಕಾಳಜಿ ವಹಿಸಲಿ ಎಂದು ಚೆಲುವರಾಯ ಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ. 

ಶಾಸಕರ ರಾಜೀನಾಮೆ ವಿಚಾರ ಪ್ರಸ್ತಾಪ :  

ರಾಜ್ಯದಲ್ಲಿ ನಡೆಯುತ್ತಿರುವ ಪ್ರಹಸನ ಎಂದಿಗೂ ನೋಡಿಲ್ಲ.  ಮುಂದೆ ನೋಡುವ ಪರಿಸ್ಥಿತಿ ಬರುವುದು ಕೂಡ ಬೇಡ. 48 ಗಂಟೆಗಳಲ್ಲಿ ಕೋರ್ಟ್ ತೀರ್ಪು ಇದ್ದು, ಏನಾಗಲಿದೆ ಎನ್ನುವುದನ್ನು ಕಾದು ನೋಡೋಣ. ನಾನೂ ಕಾಂಗ್ರೆಸ್ ನಾಯಕ ಆಗಿರುವುದರಿಂದ ನನ್ನ ನಿಜ ಅಭಿಪ್ರಾಯ ತಿಳಿಸಲು ಸಾಧ್ಯವಿಲ್ಲ ಎಂದರು. 

 ಮುಖ್ಯಮಂತ್ರಿಗಳೇ ಕಾರಣ : ರೇವಣ್ಣ ಅವರಿಂದ ಸಮಸ್ಯೆಯಾಗುತ್ತಿದೆ ಎನ್ನುವ ಅರಿವಿದ್ದ ಮೇಲೆ ಅವರನ್ನು ಹೊರಗಿಟ್ಟು ಆಡಳಿತ ನಡೆಸಬಹುದಿತ್ತು.  ಈ ರೀತಿ ಆಗಲು ಅಣ್ಣತಮ್ಮಂದಿರೇ ಹೊಣೆ ಕುಮಾರಸ್ವಾಮಿ ಇಲ್ಲದೇ ರೇವಣ್ಣ ಒಬ್ಬರೇ ಹೊಣೆಯಾಗಲು ಸಾಧ್ಯವಿಲ್ಲ ಎಂದರು.

ನಾವು 7 ಮಂದಿ ಈ ಹಿಂದೆ ತಪ್ಪು ಮಾಡಿ ಹೊರ ಬಂದಿಲ್ಲ.  ಇವತ್ತು ನಾರಾಯಣಗೌಡ ಪಕ್ಷ ಬಿಟ್ಟು ಬಂದು ಮಾತನಾಡುತ್ತಿದ್ದಾರೆ. ಅದೇ ಸ್ಥಿತಿ ಸಚಿವ ಪುಟ್ಟರಾಜುಗೂ ಬರಬಹುದು ಎಂದೂ ಹೇಳಿದರು.