ರಾಜ್ಯದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ವಿಶ್ವಾಸ ಕಳೆದುಕೊಂಡು ಅಧಿಕಾರದಿಂದ ಹೊರನಡೆದಿದೆ. ಇನ್ನೊಂದು ಕಡೆ ಹೊಸ ಸರ್ಕಾರ ರಚಿಸಲು ಬಿಜೆಪಿ ಕಸರತ್ತು ಆರಂಭಿಸಿದೆ. ಬಿಎಸ್ ಯಡಿಯೂರಪ್ಪ ಸಿಎಂ ಆಗುವುದು ಬಹುತೇಕ ಪಕ್ಕಾ ಆಗಿದೆ. ಆದರೆ ಹಿಂದೊಮ್ಮೆ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ನೀಡಿದ್ದ ಹೇಳಿಕೆ ಈಗ ಅವರನ್ನು ಕಾಡಲು ಆರಂಭಿಸಿದೆ.
ಬೆಂಗಳೂರ[ಜು. 25] ‘ಮೇ 23ರೊಳಗೆ ಯಡಿಯೂರಪ್ಪನವರು ಸಿಎಂ ಆಗಬೇಕೆಂಬ ನನ್ನ ಸವಾಲನ್ನು ಸ್ವೀಕರಿಸಿ ಗೆದ್ದಿದ್ದರೆ 1 ದಿನವಲ್ಲ 1 ತಿಂಗಳು ಅವರ ಮನೆ ಗೇಟ್ ಕಾಯುತ್ತಿದ್ದೆ. ಇಷ್ಟೆಲ್ಲ ಕಸರತ್ತು ನಡೆಸಿ ಮುಖ್ಯಮಂತ್ರಿಯಾದರೂ ಎಷ್ಟು ದಿನ ಕುರ್ಚಿಯಲ್ಲಿರುತ್ತೀರಿ ಎನ್ನುವುದಕ್ಕೆ ಗ್ಯಾರಂಟಿ ಇದೆಯೇನ್ರಿ ಸಾಹೇಬರೇ! All the best!’ ಹೀಗೆ ಬಿ.ಎಸ್ ಯಡಿಯೂರಪ್ಪ ಅವರ ಕಾಲೆಳೆದಿರುವುದು ಮಾಜಿ ಸಚಿವ, ಶಾಸಕ ಜಮೀರ್ ಅಹಮದ್ ಖಾನ್.
ಕುಂದಗೋಳ ಉಪಚುನಾವಣೆ ಸಂದರ್ಭದಲ್ಲಿ ಮೇ 23ರೊಳಗೆ ಬಿಜೆಪಿ ಸರ್ಕಾರ ರಚಿಸಿದರೆ ಯಡಿಯೂರಪ್ಪನವರ ಮನೆ ಗೇಟ್ ಕಾಯುತ್ತೇನೆ ಎಂಬ ನನ್ನ ಸವಾಲನ್ನು ಸ್ವೀಕರಿಸುವ ಧೈರ್ಯ ತೋರದ ಬಿಜೆಪಿ ನಾಯಕರು 2 ತಿಂಗಳ ನಂತರ ಹಳೆ ವಿಡಿಯೋವನ್ನು ಹರಿಬಿಟ್ಟು ವಿಕೃತಾನಂದ ಪಡುತ್ತಿರುವ ಬಗ್ಗೆ ನನಗೆ ಅನುಕಂಪ ಇದೆ ಎಂದು ಜಮೀರ್ ಹೇಳಿದ್ದಾರೆ.
ಅನರ್ಹರ ಮುಂದಿನ ಹೆಜ್ಜೆ ಏನು? ಮತ್ತೆ ಚುನಾವಣೆಗೆ ನಿಲ್ಲಲು ಸಾಧ್ಯವೆ?
ತಮ್ಮ ಟ್ವಿಟರ್ ಪೇಜ್ ನಲ್ಲಿ ಜಮೀರ್ ಈ ರೀತಿ ಬರೆದುಕೊಂಡು ಬಿ.ಎಸ್ ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದ್ದಾರೆ. ಯಡಿಯೂರಪ್ಪ ಸಿಎಂ ಆದರೆ ಸೆಕ್ಯೂರಿಟಿ ಗಾರ್ಡ್ ಆಗಿ ಅವರ ಮನೆ ಕಾಯುತ್ತೇನೆ ಎಂದು ಹಿಂದೊಮ್ಮೆ ಜಮೀರ್ ಹೇಳಿದ್ದರು.
ಇದೀಗ ಬಿಜೆಪಿ ಸರಕಾರ ರಚನೆ ಮಾತುಗಳು ಕೇಳಿಬಂದಿರುವುದರಿಂದ ಸೋಶಿಯಲ್ ಮೀಡಿಯಾ ಜಮೀರ್ ಅವರನ್ನು ಅಣಕಿಸಿತ್ತು. ಇದಕ್ಕೆ ಉತ್ತರ ಎಂಬಂತೆ ಜಮೀರ್ ತಮ್ಮ ಮಾತನ್ನು ಹೇಳಿದ್ದಾರೆ.
