ಬೆಂಗಳೂರು :  ಹಣಕಾಸು ವಿವಾದದ ಹಿನ್ನೆಲೆಯಲ್ಲಿ ತಮ್ಮ ವ್ಯವಹಾರದ ಪಾಲುದಾರನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಹಲ್ಲೆ ನಡೆಸಿದ ಆರೋಪದ ಮೇರೆಗೆ ಕಾಂಗ್ರೆಸ್‌ ಮುಖಂಡ ಮಂಜುನಾಥ್‌ ಮತ್ತು ಅವರ ಪುತ್ರ ಕಿರಣ್‌ಕುಮಾರ್‌ ವಿರುದ್ಧ ಮೈಕೋ ಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಸ್‌.ಜಿ.ಪಾಳ್ಯದ ನಿವಾಸಿ ಮಲ್ಲಿಕಾರ್ಜುನ್‌ ಹಲ್ಲೆಗೊಳಗಾಗಿದ್ದು, ಮೇ 7ರಂದು ಮೈಕೋ ಲೇಔಟ್‌ ಸಮೀಪದ ಕೃಷ್ಣ ವೈಭವ ಹೋಟೆಲ್‌ಗೆ ಅವರು ಊಟಕ್ಕೆ ತೆರಳಿದಾಗ ಈ ಗಲಾಟೆ ನಡೆದಿದೆ. ಇದಕ್ಕೆ ಪ್ರತಿಯಾಗಿ ಮಂಜುನಾಥ್‌ ಸಹ ದೂರು ಕೊಟ್ಟಿದ್ದಾರೆ. ಸಿವಿಲ್‌ ವಿಚಾರವಾಗಿ ಘರ್ಷಣೆಯಾಗಿದೆ. ಹೀಗಾಗಿ ಎರಡು ದೂರುಗಳನ್ನು ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಏನಿದು ಗಲಾಟೆ:  ಹಲವು ದಿನಗಳಿಂದ ಎಂ.ಎಸ್‌.ಪಾಳ್ಯದ ಮಂಜುನಾಥ್‌ ಅಲಿಯಾಸ್‌ ಎಸ್‌ಟಿಡಿ ಮಂಜು ಹಾಗೂ ಮಲ್ಲಿಕಾರ್ಜುನ್‌ ಸ್ನೇಹಿತರಾಗಿದ್ದು, ಈ ಗೆಳೆತನದಲ್ಲೇ ಪಾಲುದಾರಿಕೆಯಲ್ಲಿ ಇಬ್ಬರು ರಿಯಲ್‌ ಎಸ್ಟೇಟ್‌ನಲ್ಲಿ ಹಣ ತೊಡಗಿಸಿದ್ದರು. ಆದರೆ ಇತ್ತೀಚಿಗೆ ಹಣಕಾಸು ವಿಚಾರವಾಗಿ ಅವರ ನಡುವೆ ಮನಸ್ತಾಪವಾಗಿ ಪ್ರತ್ಯೇಕವಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಅದರಂತೆ ಮೇ 7ರಂದು ಕೃಷ್ಣ ವೈಭವ್‌ ಹೋಟೆಲ್‌ಗೆ ಮಲ್ಲಿಕಾರ್ಜುನ್‌ ಊಟಕ್ಕೆ ತೆರಳುತ್ತಿದ್ದರು. ಆಗ ಹೋಟೆಲ್‌ಗೆ ಹೋದ ಮಂಜುನಾಥ್‌ ಹಾಗೂ ಅವರ ಪುತ್ರ ಕಿರಣ್‌ಕುಮಾರ್‌, ನಮ್ಮ ಹಣ ನೀಡುವಂತೆ ಮಲ್ಲಿಕಾರ್ಜುನ್‌ನನ್ನು ಕೇಳಿದ್ದಾರೆ. ಈ ಹಂತದಲ್ಲಿ ಎರಡು ಕಡೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಆಗ ಕೆರಳಿದ ಮಂಜುನಾಥ್‌, ಅವರ ಪುತ್ರಿ ಕಿರಣ್‌ ಕುಮಾರ್‌ ಹಾಗೂ ಬೆಂಬಲಿಗರು, ಮಲ್ಲಿಕಾರ್ಜುನ್‌ ಮೇಲೆ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಸ್ಥಳೀಯರು, ಘಟನೆ ಕುರಿತು ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ ತಿಳಿಸಿದ್ದಾರೆ. ಮಾಹಿತಿ ಪಡೆದ ಹೊಯ್ಸಳ ಸಿಬ್ಬಂದಿ, ಘಟನಾ ಸ್ಥಳಕ್ಕೆ ತೆರಳಿ ಗಲಾಟೆ ಬಿಡಿಸಿದ್ದಾರೆ. ಈ ಘಟನೆ ವಿಡಿಯೋ ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾನ್ಯತಾ ಟೆಕ್‌ ಪಾರ್ಕ್ನಲ್ಲಿ ಜಂಟಿಯಾಗಿ ಹೂಡಿಕೆ ಮಾಡಿದ್ದೆವು. ಆಗ ಆ ಭೂಮಿಯ ದಾಖಲೆಗಳು ಮಂಜುನಾಥ್‌ ಸುಪರ್ದಿಯಲ್ಲಿವೆ. ಇತ್ತೀಚೆಗೆ ಆ ಭೂಮಿಯನ್ನು ಖರೀದಿಸಿ ಹಣ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಮಂಜುನಾಥ್‌ ಮತ್ತು ಅವರ ಪುತ್ರ ಹಲ್ಲೆ ನನ್ನ ಮೇಲೆ ಮಾಡಿದ್ದಾರೆ ಎಂದು ಮಲ್ಲಿಕಾರ್ಜುನ್‌ ಆರೋಪಿಸಿದ್ದಾರೆ.

ಆದರೆ ಈ ಹಲ್ಲೆ ಆರೋಪವನ್ನು ನಿರಾಕರಿಸಿರುವ ಮಂಜುನಾಥ್‌ ಅವರು, ಜಮೀನು ಖರೀದಿ ವಿಷಯವಾಗಿ ಪ್ರಶ್ನಿಸಿದಕ್ಕೆ ಮಲ್ಲಿಕಾರ್ಜುನ್‌ ಅವರೇ ನಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಆಪಾದಿಸಿದ್ದಾರೆ.